ಮುಂಡಗೋಡದಲ್ಲಿ ಕಾಣೆಯಾಗಿದ್ದ ಬ್ಯಾಗು ಯಲ್ಲಾಪುರದಲ್ಲಿ ಸಿಕ್ಕಿದೆ. ಪೊಲೀಸರು ಅದನ್ನು ಜೋಪಾನವಾಗಿ ವಾರಸುದಾರರಿಗೆ ಕೊಟ್ಟಿದ್ದಾರೆ.
ಮುಂಡಗೋಡಿನ ಕೆಂದಲಗೇರಿಯ ರೇಷ್ಮಾಬಾನು ಹುಸೇನ್ ಸಾಬ್ ಅವರು ಅಕ್ಟೊಬರ್ 4ರಂದು ತಮ್ಮ ಬ್ಯಾಗು ಕಳೆದುಕೊಂಡಿದ್ದರು. ಮುಂಡಗೋಡಿನ ಬಸ್ ನಿಲ್ದಾಣದ ಬಳಿ ಅವರ ಬ್ಯಾಗು ಕಾಣೆಯಾಗಿತ್ತು. ಬೆಲೆ ಬಾಳುವ ಬೆಳ್ಳಿ – ಬಂಗಾರದ ಆಭರಣಗಳು ಆ ಬ್ಯಾಗಿನಲ್ಲಿದ್ದವು. ಬ್ಯಾಗ್ ಕಾಣೆಯಾದ ಬಗ್ಗೆ ಅವರು ಆತಂಕಕ್ಕೆ ಒಳಗಾಗಿದ್ದರು. ಎಲ್ಲಾ ಕಡೆ ಹುಡುಕಿದರೂ ಬ್ಯಾಗ್ ಸಿಗದ ಕಾರಣ ಪೊಲೀಸರ ಮೊರೆ ಹೋಗಿದ್ದರು.
ಮುಂಡಗೋಡು ಪೊಲೀಸರು ವಿವಿಧ ಆಯಾಮಗಳಲ್ಲಿ ಬ್ಯಾಗಿನ ಹುಡುಕಾಟ ನಡೆಸಿದರು. ಯಲ್ಲಾಪುರದ ತಾಲೂಕಿನಲ್ಲಿ ಆ ಬ್ಯಾಗ್ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಇಡಗುಂದಿಯ ಬಳಿ ವ್ಯಕ್ತಿಯೊಬ್ಬರ ಬಳಿ ವಿಚಾರಿಸಿದಾಗ ರೇಷ್ಮಾಬಾನು ಅವರ ಬ್ಯಾಗ್ ಇದ್ದ ಜಾಗ ತೋರಿಸಿದರು. ಆ ಬ್ಯಾಗನ್ನು ವಶಕ್ಕೆಪಡೆದ ಪೊಲೀಸರು ಮುಂಡಗೋಡಿಗೆ ತೆರಳಿದರು. ರೇಷ್ಮಾಬಾನು ಅವರನ್ನು ಪೊಲೀಸ್ ಠಾಣೆಗೆ ಕರೆಯಿಸಿ, ಕಳೆದು ಹೋಗಿದ್ದ ಬ್ಯಾಗಿನಲ್ಲಿದ್ದ ವಸ್ತುಗಳ ವಿವರಪಡೆದರು.
ನಿಜವಾಗಿಯೂ ರೇಷ್ಮಾಬಾನು ಅವರದ್ದೇ ಬ್ಯಾಗ್ ಎಂದು ಖಚಿತಪಡಿಸಿಕೊಂಡು ಅದನ್ನು ಅವರಿಗೆ ಹಸ್ತಾಂತರಿಸಿದರು. ಬೆಲೆ ಬಾಳುವ ಆಭರಣ ಮರಳಿ ಸಿಕ್ಕಿದ್ದಕ್ಕಾಗಿ ರೇಷ್ಮಾಬಾನು ಅವರು ಸಂತಸಗೊoಡರು.