ನೀತಿ-ನಿಯಮಗಳನ್ನು ಪಾಲಿಸದೇ ಅರಣ್ಯ ಅತಿಕ್ರಮಣದಾರರನ್ನು ಪದೇ ಪದೇ ಒಕ್ಕಲೆಬ್ಬಿಸಲಾಗುತ್ತಿರುವುದನ್ನು ವಿರೋಧಿಸಿದ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಈ ದಿನ ಪೊಲೀಸ್ ಅಧೀಕ್ಷಕ ದೀಪಕ ಎಂ ಎನ್ ಅವರನ್ನು ಭೇಟಿ ಮಾಡಿದರು. `ಅರಣ್ಯ ಸಿಬ್ಬಂದಿಗೆ ಬೆಂಬಲ ನೀಡುವ ಬದಲು ಅರಣ್ಯ ಅತಿಕ್ರಮಣದಾರರಿಗೆ ರಕ್ಷಣೆ ಕೊಡಿ’ ಎಂದು ಅವರು ಪೊಲೀಸ್ ಅಧೀಕ್ಷಕರಲ್ಲಿ ಮನವಿ ಮಾಡಿದರು.
ವಿವಿಧ ಸಂಘಟನೆ ಮುಖ್ಯಸ್ಥರ ಜೊತೆ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಶಿರಸಿಯಲ್ಲಿ ಸಭೆ ನಡೆಸಿದ್ದು, ಈ ವೇಳೆ ರವೀಂದ್ರ ನಾಯ್ಕ ಅವರು ಅರಣ್ಯ ಅತಿಕ್ರಮಣದಾರರ ಪರವಾಗಿ ಮಾತನಾಡಿದರು `ಕಾನೂನು ವಿಧಿವಿಧಾನ ಅನುಸರಿಸದೇ ಅತಿಕ್ರಮಣದಾರರನ್ನು ಒಕ್ಕಿಲೆಬ್ಬಿಸಲಾಗುತ್ತಿದೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಇದನ್ನು ಖಂಡಿಸುತ್ತಿದ್ದು, ಪೊಲೀಸರು ತಮ್ಮ ನೆರವಿಗೆ ಬರಬೇಕು’ ಎಂದವರು ಒತ್ತಾಯಿಸಿದರು. `ಅರಣ್ಯವಾಸಿ ಹಾಗೂ ಅರಣ್ಯ ಸಿಬ್ಬಂದಿ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿದೆ. ಅರಣ್ಯ ಸಿಬ್ಬಂದಿ ಅನಗತ್ಯವಾಗಿ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಆತಂಕ ಮಾಡುತ್ತಿದ್ದಾರೆ’ ಎಂದವರು ದೂರಿದರು.
`ಮಾನವೀಯ ಮೌಲ್ಯದ ಆಧಾರದಲ್ಲಿ ಭೂಮಿ ಹಕ್ಕಿನ ಕಾನೂನು ಬದ್ಧ ಹೋರಾಟಕ್ಕೆ ಪೊಲೀಸರ ಸಹಕಾರ ಸಿಗುತ್ತದೆ’ ಎಂದು ಪೋಲಿಸ್ ವರಿಷ್ಠ ಅಧಿಕಾರಿ ದೀಪನ ಎಂ ಎನ್ ಅವರು ಪ್ರತಿಕ್ರಿಯಿಸಿದರು. ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧೀಕ್ಷಕ ಜಗದೀಶ ನಾಯ್ಕ, ಡಿವೈಎಸ್ಪಿ ಗೀತಾ ಪಾಟೀಲ್ ಅವರ ಜೊತೆಗಿದ್ದರು.