ಬಸ್ಸಿಗಾಗಿ ಕಾಯುತ್ತಿದ್ದ ಶಿರಸಿಯ ಅಶೋಕ ಕುಲಕರ್ಣಿ ಅವರ ಮೇಲೆ ಕೆಎಸ್‌ಆರ್‌ಟಿಸಿ ಬಸ್ಸು ಹತ್ತಿದೆ. ಪರಿಣಾಮ ಅವರ ಕೈಗೆ ಭಾರೀ ಪ್ರಮಾಣದಲ್ಲಿ ಗಾಯವಾಗಿದ್ದು, ಚಿಕಿತ್ಸೆಗಾಗಿ ಅವರು ಧಾರವಾಡಕ್ಕೆ ಹೋಗಿದ್ದಾರೆ.
ಅಕ್ಟೊಬರ್ 6ರಂದು ಯಲ್ಲಾಪುರ ನಾಕಾದ ಬಳಿ ಅಶೊಕ ಕುಲಕರ್ಣಿ ಅವರು ನಿಂತಿದ್ದರು. ಅವರು ತಮ್ಮ ಕೆಲಸದ ಸಲುವಾಗಿ ಹಳೆ ಬಸ್ ನಿಲ್ದಾಣಕ್ಕೆ ಹೋಗುವವರಿದ್ದು, ಬಸ್ಸಿಗಾಗಿ ಕಾಯುತ್ತಿದ್ದರು. ಆ ವೇಳೆ ಕೆಎಸ್‌ಆರ್‌ಟಿಸಿ ಬಸ್ಸನ್ನು ಚಾಲಕ ಗಣೇಶ ನಾಯ್ಕ ಅವರು ಓಡಿಸಿಕೊಂಡು ಬಂದರು. ಅಶೋಕ ಕುಲಕರ್ಣಿ ಅವರು ಬಸ್ಸಿಗೆ ಅಡ್ಡಲಾಗಿ ಕೈ ಮಾಡಿದ್ದರಿಂದ ಗಣೇಶ ನಾಯ್ಕ ಅವರು ಬಸ್ಸು ನಿಲ್ಲಿಸಿದರು.
ಅಶೋಕ ಕುಲಕರ್ಣಿ ಅವರು ಬಸ್ಸಿನ ಮೆಟ್ಟಿಲು ಹತ್ತುತ್ತಿರುವಾಗಲೇ ನಿರ್ವಾಹಕಿ ಪದ್ಮಾವತಿ ಅವರು ಸೀಟಿ ಹೊಡೆದರು. ಗಣೇಶ ನಾಯ್ಕ ಅವರು ಏಕಾಏಕಿ ಬಸ್ಸು ಮುಂದೆ ಚಲಾಯಿಸಿದ್ದರಿಂದ ಅಶೋಕ ಕುಲಕರ್ಣಿ ಅವರು ಮೆಟ್ಟಿಲಿನಿಂದ ಕೆಳಗೆ ಬಿದ್ದರು. ಆಗ, ಅವರ ಎಡಗೈ ಮೇಲೆ ಬಸ್ಸಿನ ಹಿಂದಿನ ಚಕ್ರ ಹತ್ತಿತು.
ಗಾಯಗೊಂಡ ಅವರನ್ನು ಅಲ್ಲಿದ್ದ ಜನ ಟಿಎಸ್‌ಎಸ್ ಆಸ್ಪತ್ರೆಗೆ ಸೇರಿಸಿದರು. ಭಾರೀ ಪ್ರಮಾಣದಲ್ಲಿ ರಕ್ತ ಬರುವುದನ್ನು ನೋಡಿದ ಟಿಎಸ್‌ಎಸ್ ವೈದ್ಯರು ಅಶೋಕ ಕುಲಕರ್ಣಿ ಅವರನ್ನು ಧಾರವಾಡಕ್ಕೆ ಕರೆದೊಯ್ಯುವಂತೆ ಸೂಚಿಸಿದರು. ಸದ್ಯ ಅಶೋಕ ಕುಲಕರ್ಣಿ ಅವರು ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.
ಅಶೋಕ ಕುಲಕರ್ಣಿ ಅವರ ಸಂಬAಧಿಕರಾದ ರಾಮನಬೈಲಿನ ಮಹಾವೀರ ನಿಲಯದ ಅರ್ಚಕ ಮಹಾವೀರ ಆಲೂರು ಅವರು ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿಪಡೆದರು. ಅಶೋಕ ಕುಲಕರ್ಣಿ ಅವರು ನೀಡಿದ ಮಾಹಿತಿ ಆಧಾರದಲ್ಲಿ ಅವರು ಪೊಲೀಸ್ ಠಾಣೆಗೆ ಬಂದರು. ಬಸ್ ಚಾಲಕ ಹಾಗೂ ನಿರ್ವಾಹಕಿ ವಿರುದ್ಧ ಅವರು ಶಿರಸಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.