ಕಾರವಾರದ ಕದ್ರಾದಲ್ಲಿನ ಕೊಟ್ಟಿಗೆಗೆ ನುಗ್ಗುವ ಕರಿ ಚಿರತೆ ಅಲ್ಲಿರುವ ಮರಿಗಳನ್ನು ಮಾತ್ರ ಗುರಿಯಾಗಿರಿಸಿಕೊಂಡು ಕೊಲ್ಲುತ್ತಿದೆ. ಆಕಳು ಹಾಗೂ ಎಮ್ಮೆ ಮರಿಗಳ ಕರಳು ತಿಂದು ಕರಿ ಚಿರತೆ ಕಾಡು ಸೇರುತ್ತಿದೆ.
Advertisement. Scroll to continue reading.
ಕಾರವಾರದ ಕದ್ರಾ ವಲಯದ ಬೋರೆ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರುಗಳ ಮೇಲೆ ಗುರುವಾರ ರಾತ್ರಿ ಚಿರತೆ ದಾಳಿ ಮಾಡಿದೆ. ಕೊಟ್ಟಿಗೆಯಲ್ಲಿದ್ದ ಮೂರು ಮರಿಗಳನ್ನು ಚಿರತೆ ಅರೆಬರೆಯಾಗಿ ಭಕ್ಷಿಸಿದೆ. ಶುಕ್ರವಾರ ಬೆಳಗ್ಗೆ ಮೂರು ಜಾನುವಾರುಗಳು ಸಾವನಪ್ಪಿದನ್ನು ನೋಡಿ ಕೊಟ್ಟಿಗೆ ಮಾಲಕರು ಕಂಗಾಲಾಗಿದ್ದಾರೆ.
ಕೊಟ್ಟಿಗೆ ತುಂಬ ರಕ್ತಮಯವಾಗಿದ್ದು, ಅಲ್ಲಿ ಎರಡು ಎಮ್ಮೆ ಕರುಗಳು ರಕ್ತಸಿಕ್ತವಾಗಿ ಬಿದ್ದು ಸಾವನಪ್ಪಿದ್ದವು. ಇನ್ನೊಂದು ಕರುವಿನ ಹೊಟ್ಟೆಯೇ ಕಾಣೆಯಾಗಿದ್ದು, ಕರಳು ಅರ್ದ ಹೊರ ಬಂದಿತ್ತು. ಈ ಭಾಗದಲ್ಲಿ ಚಿರತೆ ಓಡಾಟ ಸಾಮಾನ್ಯವಾಗಿದ್ದರೂ ಕೊಟ್ಟಿಗೆಗೆ ನುಗ್ಗಿದ ನಿದರ್ಶನಗಳು ಕಡಿಮೆಯಿದ್ದವು. ಅದರಲ್ಲಿಯೂ ಒಂದೇ ದಿನ ಮೂರು ಮರಿಗಳ ಮೇಲೆ ಆಕ್ರಮಣ ನಡೆದಿದ್ದು ಅಪರೂಪದಲ್ಲಿಯೇ ಅಪರೂಪ.
ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿದ್ದಾರೆ. ಚಿರತೆ ಹೆಜ್ಜೆ ಗುರುತನ್ನು ಅವರು ಗಮನಿಸಿದ್ದಾರೆ. ಜನ ವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿದರೆ ಕೂಡಲೇ ಮಾಹಿತಿ ಕೊಡಿ ಎಂದು ಅರಣ್ಯ ಸಿಬ್ಬಂದಿ ಹೇಳಿದ್ದಾರೆ.