ಸಮಯಕ್ಕೆ ಸರಿಯಾಗಿ ಸರ್ಕಾರದಿಂದ ಔಷಧ ಪೂರೈಕೆ ಆಗದ ಪರಿಣಾಮ ಪಶುವೈದ್ಯರೊಬ್ಬರು ಪೆಟ್ಟು ತಿಂದಿದ್ದಾರೆ. ಪೆಟ್ಟು ತಿಂದ ವೈದ್ಯರು ಇದೀಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಜೊಯಿಡಾದ ರಾಮನಗರದಲ್ಲಿ ಎಚ್ ರಾಮಚಂದ್ರ ಯಾದವ್ ಅವರು ಪಶುವೈದ್ಯರಾಗಿದ್ದಾರೆ. ಸರ್ಕಾರಿ ಸೌಲಭ್ಯವನ್ನು ಹೈನುಗಾರರಿಗೆ ಕೊಡುವಲ್ಲಿ ಅವರು ಶ್ರಮಿಸುತ್ತಿದ್ದಾರೆ. ಹೀಗಿರುವಾಗ ರಾಮನಗರದ ದುರ್ಗಾದೇವಿಗಲ್ಲಿಯ ದಿನೇಶ ತುಕಾರಾಮ ಮಿರಾಶಿ ಪಶು ಆಸ್ಪತ್ರೆಗೆ ಬಂದರು. `ಮೇಕೆಗೆ ಉಣ್ಣೆ ಔಷಧಿ ಬೇಕು’ ಎಂದು ಅವರು ಕೇಳಿದರು. ಬಾಟಲಿ ಇಲ್ಲದೇ ಖಾಲಿ ಕೈಯಲ್ಲಿ ಬಂದ ದಿನೇಶ ಮಿರಾಶಿ ಅವರಿಗೆ ಬಾಟಲಿ ತೆಗೆದುಕೊಂಡು ಬರುವಂತೆ ರಾಮಚಂದ್ರ ಯಾದವ್ ಅವರು ಸೂಚಿಸಿದರು.
ಅದಾದ ನಂತರ `ಮೇಕೆಗೆ ಲಿವರ್ ಟಾನಿಕ್ ಬೇಕು. ಅದನ್ನಾದರೂ ಕೊಡಿ’ ಎಂದು ದಿನೇಶ ಮಿರಾಶಿ ಕೇಳಿದರು. `ಆ ಔಷಧಿ ಸರ್ಕಾರದಿಂದ ಪೂರೈಕೆ ಆಗಿಲ್ಲ. ಈ ತಿಂಗಳ ಕೊನೆಗೆ ಬರಬಹುದು’ ಎಂದು ವೈದ್ಯರು ಹೇಳಿದರು. ಇದರಿಂದ ಸಿಟ್ಟಾದ ದಿನೇಶ ಮಿರಾಶಿ `ಟಾನಿಕ್ ಇಲ್ಲ ಎಂದಾದರೆ ಚಿಕಿತ್ಸಾಲಯ ಏಕೆ? ಡಾಕ್ಟರ್ ಏಕೆ?’ ಎಂದು ದಬಾಯಿಸಿದರು.
ಅದಾದ ನಂತರ ಮರಾಠಿ ಭಾಷೆಯಲ್ಲಿ ಬೈದ ದಿನೇಶ ಮಿರಾಶಿ ಡಾಕ್ಟರ್ ತಲೆ ಮೇಲೆ ಕುಟ್ಟಿದರು. ತಲೆಯ ಹಿಂಬಾಗ ಎರಡು ಏಟು ಹೊಡೆದರು. ಇದರಿಂದ ನೋವು ಅನುಭವಿಸಿದ ವೈದ್ಯರು ಮೇಲಾಧಿಕಾರಿಗಳಿಗೆ ವರದಿ ಒಪ್ಪಿಸಿದರು. ಮೇಲಧಿಕಾರಿಗಳ ಸೂಚನೆ ಮೇರೆಗೆ ರಾಮನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು.