ಭಟ್ಕಳದ ಸುಧಾ ನಾಯ್ಕ ಹಾಗೂ ಅಣ್ಣಪ್ಪ ನಾಯ್ಕ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಸುಧಾ ನಾಯ್ಕ ಅವರಿಗೆ ಅಣ್ಣಪ್ಪ ನಾಯ್ಕ ಅವರು ನಿತ್ಯವೂ ಹಿಂಸೆ ನೀಡುತ್ತಿದ್ದು, ಇದನ್ನು ಪ್ರಶ್ನಿಸಿದ ಕಾರಣ ಕತ್ತಿ ಬೀಸಿದ್ದಾರೆ.
ಭಟ್ಕಳದ ಹೊಳಗದ್ದೆ ಕಡೆಯವರಾದ ಸುಧಾ ನಾಯ್ಕ ಅವರು 14 ವರ್ಷಗಳ ಹಿಂದೆ ಬಳಕೆ ಬಳಿಯ ಕೊಚ್ರೆಯ ಅಣ್ಣಪ್ಪ ನಾಯ್ಕ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಮೊದಲ ಮೂರು ವರ್ಷ ಅವರಿಬ್ಬರು ಸುಂದರ ಸಂಸಾರ ನಡೆಸಿದ್ದರು. ಅದಾದ ನಂತರ ಅಣ್ಣಪ್ಪ ನಾಯ್ಕ ಅವರಿಗೆ ಪತ್ನಿ ಮೇಲೆ ಸಂಶಯ ಶುರುವಾಯಿತು. ಆ ಸಂಶಯ ಹೊಡೆದಾಟಕ್ಕೆ ಕಾರಣವಾಯಿತು.
ಸುಧಾ ನಾಯ್ಕ ಅವರ ಮೇಲೆ ಹಲ್ಲೆ ಮಾಡುವುದು ಅಣ್ಣಪ್ಪ ನಾಯ್ಕ ಅವರಿಗೆ ಸಾಮಾನ್ಯ ವಿಷಯವಾಯಿತು. ಮಾನಸಿಕ ಹಿಂಸೆಗೆ ಕೊನೆಯೇ ಇರಲಿಲ್ಲ. ಅಕ್ಟೊಬರ್ 5ರ ಸಂಜೆ ಅಣ್ಣಪ್ಪ ನಾಯ್ಕ ಅವರು ಮಕ್ಕಳಿಗೆ ಹೊಡೆಯುತ್ತಿದ್ದರು. ಅದನ್ನು ಸುಧಾ ನಾಯ್ಕ ಅವರ ಬಳಿ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಕ್ಕಳಿಗೆ ಹೊಡೆಯುವುದನ್ನು ತಪ್ಪಿಸಲು ಸುಧಾ ನಾಯ್ಕ ಅವರು ಜೋರಾಗಿ ಬೊಬ್ಬೆ ಹಾಕಿದರು.
`ನಿನ್ನದು ದಿನಾ ಹೀಗೆ ಆಯಿತು. ನಾವು ಮನೆ ಬಿಟ್ಟು ಹೋಗುತ್ತೇವೆ’ ಎಂದು ಸುಧಾ ನಾಯ್ಕ ಅವರು ಧೈರ್ಯದಿಂದ ಮಾತನಾಡಿದರು. ಇದೇ ವಿಷಯವಾಗಿ ಅವರು ದೊಡ್ಡದಾಗಿ ಅಬ್ಬರಿಸಿದರು. ಇದರಿಂದ ಅಣ್ಣಪ್ಪ ನಾಯ್ಕ ಅವರ ಸಿಟ್ಟು ನೆತ್ತಿಗೇರಿದ್ದು, ಮನೆಯಲ್ಲಿದ್ದ ಕತ್ತಿ ತೆಗೆದುಕೊಂಡು ಸುಧಾ ನಾಯ್ಕ ಅವರ ಕಡೆ ಬೀಸಿದರು. ಸುಧಾ ನಾಯ್ಕ ಅವರು ತಪ್ಪಿಸಿಕೊಳ್ಳಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಪರಿಣಾಮ ಅವರ ಬೆನ್ನಿಗೆ ಗಾಯವಾಯಿತು.
ಅಣ್ಣಪ್ಪ ನಾಯ್ಕ ಅವರ ಉಗ್ರ ಅವತಾರ ನೋಡಿದ ಸುಧಾ ನಾಯ್ಕ ಅವರ ಅಣ್ಣನ ಮಗ ರಾಘವೇಂದ್ರ ನಾಯ್ಕ ಇನ್ನಷ್ಟು ಆಕ್ರಮಣ ತಪ್ಪಿಸುವ ಪ್ರಯತ್ನ ಮಾಡಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಅಣ್ಣಪ್ಪ ನಾಯ್ಕ ಅವರು ಈ ವೇಳೆ ರಾಘವೇಂದ್ರ ನಾಯ್ಕ ಅವರಿಗೂ ಎರಡು ಏಟು ಹೊಡೆದರು. ಅವರ ಕೈ ಹಿಡಿದು ನೋವು ಮಾಡಿದರು. ಬೆರಳಿಗೂ ಗಾಯ ಮಾಡಿದರು. `ಈ ವಿಷಯದ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಕೊಲೆ ಮಾಡುವೆ’ ಎಂದು ಬೆದರಿಸಿದರು.
ಅದಾಗಿಯೂ ಸುಧಾ ನಾಯ್ಕ ಅವರು ಹೆದರಲಿಲ್ಲ. ಪತಿ ಕಾಟದ ವಿರುದ್ಧ ಅವರು ಪೊಲೀಸರ ಬಳಿ ವಿವರಿಸಿದರು. ಭಟ್ಕಳ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದರು.