30-35 ವರ್ಷಗಳ ಕಾಲ ಅನುದಾನಿತ ಶಾಲಾ ಶಿಕ್ಷಕರನ್ನು ದುಡಿಸಿಕೊಳ್ಳುವ ಸರ್ಕಾರ ನಿವೃತ್ತಿ ನಂತರ ಪಿಂಚಣಿ ಕೊಡದೇ ಮನೆಗೆ ಕಳುಹಿಸುತ್ತಿದೆ. ಸುದೀರ್ಘ ಸೇವೆ ಸಲ್ಲಿಸಿದರೂ ನಿವೃತ್ತಿ ನಂತರ ಆ ಶಿಕ್ಷಕರಿಗೆ ಯಾವ ಸೌಲಭ್ಯವೂ ಸಿಗುತ್ತಿಲ್ಲ.
ರಾಜ್ಯದಲ್ಲಿ 50 ಸಾವಿರಕ್ಕೂ ಅಧಿಕ ಶಿಕ್ಷಕರು ಅನುದಾನಿತ ಶಾಲೆಗಳಲ್ಲಿದ್ದಾರೆ. ಅವರೆಲ್ಲರೂ ಈಗ ಸಂಘಟಿತರಾಗುತ್ತಿದ್ದಾರೆ. ಅಖಿಲ ಕರ್ನಾಟಕ ಹಾಗೂ ಪಿಂಚಣಿ ವಂಚಿತ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಸಭೆ ಯಲ್ಲಾಪುರಲ್ಲಿ ನಡೆದಿದ್ದು, ಸಂಘದ ಬಲವರ್ಧನೆ ಬಗ್ಗೆ ಚರ್ಚಿಸಲಾಗಿದೆ. ಈ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಜಿ ಹನುಮಂತಪ್ಪ ಅವರು ಭಗವಹಿಸಿ `ಸಂಘಟನೆ ಒಂದೇ ನೌಕರರ ಸಮಸ್ಯೆಗೆ ಪರಿಹಾರ’ ಎಂದು ಘೋಷಿಸಿದ್ದಾರೆ.
`ಸರ್ಕಾರ ಪ್ರಣಾಳಿಕೆಯಲ್ಲಿ ಪ್ರಕಟಿಸಿದ ಹಾಗೇ ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಇಲ್ಲವಾದರೆ ನಮ್ಮ ಪ್ರತಿಭಟನೆ ಎದುರಿಸಬೇಕು’ ಎಂದು ಅವರು ಎಚ್ಚರಿಸಿದ್ದಾರೆ. `ಸರ್ಕಾರ ಅನುದಾನಿತ ಶಾಲೆಯವರನ್ನು ಮಲತಾಯಿ ಮಕ್ಕಳ ರೀತಿ ನೋಡುತ್ತಿದೆ. ನಿವೃತ್ತಿ ನಂತರ ಅನುದಾನಿತ ಶಾಲೆ ಸಿಬ್ಬಂದಿ ಸಮಸ್ಯೆಗೆ ಸಿಲುಕುತ್ತಿದ್ದಾರೆ’ ಎಂದು ವಿವರಿಸಿದರು. `ಸರ್ಕಾರಿ ನೌಕರರಿಗೆ ನೀಡುತ್ತಿರುವ ಆರೋಗ್ಯ ಸಂಜೀವಿನಿ ಸಹ ಈ ಶಿಕ್ಷಕರಿಗೆ ಸಿಗುತ್ತಿಲ್ಲ. 23 ವರ್ಷಗಳಿಂದ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಖಾಲಿಯಿರುವ ಹುದ್ದೆಯನ್ನು ಭರ್ತಿ ಮಾಡಿಲ್ಲ’ ಎಂದು ದೂರಿದರು.
`ಸರ್ಕಾರಿ ನೌಕರರು ಶಿಶು ಪಾಲನೆ ರಜೆಗೆ ಹೋದರೆ ಅವರ ವೇತನವನ್ನು ಸರ್ಕಾರ ನೀಡುತ್ತದೆ. ಆದರೆ, ಅನುದನಿತ ಶಾಲಾ ಸಿಬ್ಬಂದಿಗೆ ಈ ಸೌಕರ್ಯ ಇಲ್ಲ. ಸರ್ಕಾರಿ ನೌಕರರು ಕರ್ತವ್ಯದ ವೇಳೆ ಮರಣಹೊಂದಿದರೆ ಶವ ಸಂಸ್ಕಾರಕ್ಕೆ ಕಲ್ಯಾಣ ನಿಧಿ ಬಳಕೆ ಆಗುತ್ತದೆ. ಆದರೆ, ಆ ಕಲ್ಯಾಣ ನಿಧಿಗಳಿಗೆ ನಮ್ಮ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಹಣಪಡೆದರೂ ಅದರ ಬಳಕೆಗೆ ಕೊಡುತ್ತಿಲ್ಲ’ ಎಂದು ವಿವರಿಸಿದರು.
`ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 143 ದಿನ ಹೋರಾಟ ನಡೆಯಿತು. ಆಗ ನೀಡಿದ ಭರವಸೆಗಳು ಈಡೇರಿಲ್ಲ’ ಎಂದು ಕಿಡಿಕಾರಿದರು. ಪ್ರಮುಖರಾದ ಬಸಪ್ಪ ತಳವಾರ್, ಡಿ ಆರ್ ಹೆಗಡೆ, ಶಿವಾನಂದ ಬಡಿಗೇರ್, ವಿನಾಯಕ ಶೇಟ, ಮುಕ್ತಾ ಶಂಕರ ಇತರರು ಭಾಗವಹಿಸಿದ್ದರು. ಎಂ ರಾಜಶೇಖರ, ವೆಂಕಟ್ರಮಣ ಭಟ್ಟ, ನೆಲ್ಸನ ಗೋನ್ಸಾಲ್ವಿಸ ಕಾರ್ಯಕ್ರಮ ನಿರ್ವಹಿಸಿದರು.