ಭಟ್ಕಳದಲ್ಲಿ ಅಮಾಯಕರಿಗೆ ಅನಗತ್ಯವಾಗಿ ಥಳಿಸುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹೊಡೆದಾಟ ತಪ್ಪಿಸಲು ಹೋಗುವವರು ಸಹ ಪೆಟ್ಟು ತಿನ್ನುತ್ತಿದ್ದಾರೆ. ಇಂಥಹುದೇ ಒಂದು ಪ್ರಕರಣದಲ್ಲಿ ಮಹಮದ್ ರೋಹೇಬ್ ಸಹ ಹಲ್ಲೆಗೆ ಒಳಗಾಗಿದ್ದಾರೆ.
19 ವರ್ಷದ ಮಹಮದ್ ರೋಹೇಬ್ ಅವರು ಭಟ್ಕಳದ ಪುರವರ್ಗ ಮುಗಳಿಹೊಂಡದ 3ನೇ ಕ್ರಾಸಿನ ಭಾಷಾ ಹೌಸ್ ನಿವಾಸಿ. ಅಕ್ಟೊಬರ್ 11ರ ರಾತ್ರಿ 9.30ಕ್ಕೆ ಅವರು ನೆಹರು ರಸ್ತೆಯ ಕಡೆ ಹೋಗಿದ್ದರು. ಅಲ್ಲಿನ ರಂಜನ್ ಗ್ಯಾಸ್ ಎಜನ್ಸಿ ಎದುರು ಎಂಟು ಜನ ಸೇರಿ ಒಬ್ಬನಿಗೆ ಹೊಡೆಯುತ್ತಿದ್ದರು. ಇದನ್ನು ನೋಡಿದ ಮಹಮದ್ ರೋಹೇಬ್ ಅವರು ಆ ಹುಡುಗನ ಪರ ಧ್ವನಿ ಎತ್ತಿದರು. ಪರಿಣಾಮ ಅಲ್ಲಿದ್ದ ಜನ ಮಹಮದ್ ರೋಹೇಬ್ ಅವರನ್ನು ಹಿಡಿದು ಥಳಿಸಿದರು.
ಬದ್ರಿಯಾ ಕಾಲೋನಿಯ ಹಮ್ದಾನ್ ಅವರು ಅಮಾಯಕನಿಗೆ ಹೊಡೆಯುತ್ತಿರುವುದನ್ನು ಮಹಮದ್ ರೋಹೇಬ್ ಅವರು ನೋಡಿದ್ದರು. ಹಮ್ದಾನ್ ಅವರನ್ನು ಉದ್ದೇಶಿಸಿ `ಆತನಿಗೆ ಏಕೆ ಹೊಡೆಯುತ್ತೀರಿ?’ ಎಂದು ಪ್ರಶ್ನಿಸಿದ್ದರು. `ಅಡ್ಡ ಬಂದರೆ ನಿನಗೂ ಹೊಡೆಯುವೆ’ ಎಂದು ಕೂಗಿದ ಹಮ್ದಾನ್ ಕೈಯಿಂದ ಒಂದು ಏಟು ಕೊಟ್ಟರು. ಇದನ್ನು ಮಹಮದ್ ರೋಹೇಬ್ ವಿರೋಧಿಸಿದಾಗ ಉಳಿದವರು ಸೇರಿ ಥಳಿಸಲು ಶುರು ಮಾಡಿದರು. ಮಹಮದ್ ರೋಹೇಬ್ ಅಲ್ಲಿಂದ ತಪ್ಪಿಸಿಕೊಂಡು ಓಡಿದರೂ ಸಹ ಅವರು ಬಿಡಲಿಲ್ಲ. ಹಿಂಬಾಲಿಸಿಕೊAಡು ಬಂದು ಇನ್ನಷ್ಟು ಪೆಟ್ಟು ಕೊಟ್ಟು ಪರಾರಿಯಾದರು.
ಅದಾದ ನಂತರ ಅಕ್ಟೊಬರ 13ರ ರಾತ್ರಿ ಮಹಮದ್ ರೋಹೇಬ್ ಅವರ ಗೆಳೆಯ ಮಹಮ್ಮದ್ ನಿಹಾದ್ ಅವರು ಮನೆಗೆ ಹೊರಟಿದ್ದರು. ಆಗಲೂ, ಹೂವಿನಪೇಟೆಯ ಹಿಮಾಚಲ ಸ್ಟೋರ್ಸಿನ ಬಳಿ ಬೈಕಿನಲ್ಲಿ ಬಂದ ಕೆಲವರು ಅವರನ್ನು ಅಡ್ಡಗಟ್ಟಿದರು. ಆ ದಿನ ಹೊಡೆಪೆಟ್ಟಿನಲ್ಲಿ ಭಾಗಿಯಾಗಿದ್ದ ಬದ್ರಿಯಾ ಕಾಲೋನಿಯ ಹಮ್ದಾನ್ ಜೊತೆ ಕಾರಗದ್ದೆಯ ಸೆನಾನ್ ಮುಬಾರಕ್, ಫಾರುಕ್ ಸ್ಟಿಟಿನ ಮಾನ್ ಅಕ್ರಮಿ. ಶಾದ್ಲಿಸ್ಟಿಟಿನ ಮೊಹಮದ್ ಕಾಶೀಮ್, ಇಸ್ಸಾ ಹಾಗೂ ಬಿಲಾಲ್ ಸೇರಿ `ನೀನು ಮಹಮದ್ ರೋಬರಿಗೆ ಬೆಂಬಲ ಕೊಡುತ್ತೀಯಾ?’ ಎಂದು ಪ್ರಶ್ನಿಸಿದರು. ಮಹಮ್ಮದ್ ನಿಹಾದ್ ಅವರಿಗೂ ಅವರೆಲ್ಲರೂ ಜೀವ ಬೆದರಿಕೆ ಒಡ್ಡಿದರು.
ಮೊದಲ ದಿನ ಸಹಿಸಿಕೊಂಡಿದ್ದ ಮಹಮದ್ ರೋಹೇಬ್ ಅವರು ಮರುದಿನ ಗೆಳೆಯನಿಗೂ ಬೆದರಿಸಿದನ್ನು ನೋಡಿ ಸುಮ್ಮನೆ ಕೂರಲಿಲ್ಲ. ಭಟ್ಕಳ ಶಹರ ಪೊಲೀಸ್ ಠಾಣೆಗೆ ತೆರಳಿ ಆ ಎಲ್ಲರ ವಿರುದ್ಧ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದರು.