ಕಾರವಾರದಲ್ಲಿ 50 ಅಡಿ ಆಳಕ್ಕೆ ಬಿದ್ದ ಎತ್ತು ಅಪಾಯದಿಂದ ಪಾರಾಗಿದೆ. ಕಿಂಚಿತ್ತು ಗಾಯ ಮಾಡಿಕೊಳ್ಳದೇ ಆ ಎತ್ತು ಬಾವಿಯಿಂದ ಮೇಲೆದ್ದು ಬಂದಿದೆ.
ಕಾರವಾರದ ಗಾಂವಕರವಾಡ ಮಲ್ಲಿಕಾರ್ಜುನ ದೇವಸ್ಥಾನ ಹತ್ತಿರದ ಬಾವಿಯೊಳಗೆ ಎತ್ತು ಬಿದ್ದಿತ್ತು. ಇದನ್ನು ನೋಡಿದ ಜನ ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದರು. ಶಾಂತರಾಮ ಗಾಂವಕರ ಅವರು ಅಗ್ನಿಶಾಮಕ ಸಿಬ್ಬಂದಿಗೆ ಬರುವಂತೆ ಮನವಿ ಮಾಡಿದರು. ತಮ್ಮ ವಾಹನದ ಜೊತೆ ಬಂದ ರಕ್ಷಣಾ ಸಿಬ್ಬಂದಿ ಎತ್ತಿನ ಪರಿಸ್ಥಿತಿ ಅವಲೋಕಿಸಿದರು. ಬಾವಿಯ ಆಳದಲ್ಲಿ ಎತ್ತು ಹೊರಳಾಡುತ್ತಿರುವುದನ್ನು ನೋಡಿದ ಅವರು ಉಪಾಯವಾಗಿ ಅದನ್ನು ಮೇಲೆತ್ತುವ ಕೆಲಸ ಶುರು ಮಾಡಿದರು.
ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ ಗೌಡ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಶುರುವಾಯಿತು. ಒಂದುವರೆ ತಾಸುಗಳ ಕಾಲ ಅಗ್ನಿಶಾಮಕ ಠಾಣೆ ಸಿಬ್ಬಂದಿ ರಾಜೇಶ್ ಎಂ ರಾಣೆ, ವಿನಾಯಕ ಎಂ ನಾಯ್ಕ, ಟೋನಿ ಅಲೆಕ್ಸ್ ಬಾರಾಭೋಜ, ಪ್ರವೀಣ ಕೆ ನಾಯ್ಕ, ಕುಮಾರ ಕೆ ಎಸ್ ಹಾಗೂ ಭರತ ಕುಮಾರ ಸಾಹಸ ನಡೆಸಿದರು. ಯಂತ್ರವನ್ನು ಬಾವಿಗಿಳಿಸಿದ ಅವರು ಹಗ್ಗದಿಂದ ಎತ್ತನ್ನು ಕಟ್ಟಿದರು.
ನಿಧಾನವಗಿ ಹಗ್ಗ ಎಳೆದಂತೆ ಎತ್ತು ಮೇಲೆ ಬಂದಿತು. ಪಾತಾಳದಲ್ಲಿದ್ದ ಎತ್ತು ಭೂಮಿ ಕಂಡ ತಕ್ಷಣ ಲವಲವಿಕೆಯಿಂದ ಓಡಲು ಶುರು ಮಾಡಿತು.