ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಫಸಲು ತೀರಾ ಕಡಿಮೆಯಿದೆ. ಹವಾಮಾನ ವೈಪರಿತ್ಯದ ಕಾರಣದಿಂದ ಅಡಿಕೆಗೆ ಬಗೆ ಬಗೆಯ ರೋಗಗಳು ಬಾದಿಸುತ್ತಿದೆ.
ಬಿಸಿಲು-ಮಳೆ ವ್ಯತ್ಯಾಸದಿಂದಾಗಿ ಕೆಲವಡೆ ಮೂರು ಬಾರಿ ಮದ್ದು ಹೊಡೆದರು ಕೊಳೆ ರೋಗ ನಿಯಂತ್ರಣಕ್ಕೆ ಬಂದಿಲ್ಲ. ಕಳೆದ ವರ್ಷದ ಎಲೆಚುಕ್ಕಿ ರೋಗದಿಂದ ಅಡಿಕೆ ಮರಗಳು ಚೇತರಿಸಿಕೊಂಡಿಲ್ಲ. ಈ ನಡುವೆ ತೋಟದಲ್ಲಿ ಬೀಳುತ್ತಿರುವ ಹಣ್ಣಡಿಕೆ ಒಣಗಿಸಲು ಯೋಗ್ಯ ಬಿಸಿಲು ಬರುತ್ತಿಲ್ಲ. ಅತಿವೃಷ್ಠಿ ಕಾರಣಕ್ಕೆ ಬಹುತೇಕ ಅಡಿಕೆ ಸಿಂಗಾರ ಕೊಳೆತಿದ್ದು, ಈ ಬಾರಿ ಅಡಿಕೆಗೆ ಉತ್ತಮ ದರವಿದ್ದರೂ ರೈತರ ಬಳಿ ಬೇಡಿಕೆಗೆ ಅನುಗುಣವಾಗಿ ಅಡಿಕೆ ಪೂರೈಸಲು ಆಗುತ್ತಿಲ್ಲ.
ಜಿಲ್ಲೆಯ ಹಲವು ಕಡೆ ಬೆಳಗ್ಗೆ ಬಿಸಿಲಿದ್ದರೆ ಮಧ್ಯಾಹ್ನದ ವೇಳೆ ಮಳೆಯಾಗುತ್ತಿದೆ. ಬಿಸಿಲು ಬಂದಿದೆ ಎಂದು ಅಡಿಕೆ ಒಣಗಿಸಲು ಮುಂದಾದ ಕೆಲವೇ ಕ್ಷಣದಲ್ಲಿ ಮೋಡ ಕಾಣಿಸುತ್ತಿದೆ. ಮೊದಲೇ ಅತಿವೃಷ್ಠಿ ಕಾರಣದಿಂದ ಅಡಿಕೆ ಹಾಳಾಗಿರುವ ಚಿಂತೆಯಲ್ಲಿರುವ ರೈತರಿಗೆ ಮಳೆ-ಮೋಡದ ವಾತಾವರಣ ತಲೆಬಿಸಿ ಮಾಡುತ್ತಿದೆ. ಅಳಿದುಳಿದ ಅಡಿಕೆಯನ್ನು ಉಳಿಸಿಕೊಳ್ಳಲು ಅಡಿಕೆ ಬೆಳೆಗಾರರು ನಾನಾ ಬಗೆಯ ಕಸರತ್ತು ಮಾಡುತ್ತಿದ್ದಾರೆ.
ಅನೇಕ ಕಡೆ ತೋಟದಲ್ಲಿ ಬಿದ್ದ ಅಡಿಕೆ ಹೆಕ್ಕಲು ಸರಿಯಾದ ಕೂಲಿ ಆಳುಗಳು ಸಿಗುತ್ತಿಲ್ಲ. ಹೆಕ್ಕಿದ ಅಡಿಕೆಯನ್ನು ಹಾಗೇ ಮಾರುಕಟ್ಟೆಗೆ ಒಯ್ಯುವ ಅವಕಾಶವಿದ್ದರೂ ಅಲ್ಲಿ ಕೂಲಿ ಆಳಿಗೆ ಪಾವತಿಸಿದ ಮೊತ್ತವೂ ಸಿಗುತ್ತಿಲ್ಲ. ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡ ಭಾಗದಲ್ಲಿ ಅಕ್ಟೊಬರ್ 3ನೇ ವಾರದಿಂದ ಹಸಿ ಅಡಿಕೆ ಕೊಯ್ಲಿನ ಹಂಗಾಮು ಶುರುವಾಗಲಿದ್ದು, ಅದಕ್ಕೂ ಪೂರ್ವ ಹಣ್ಣಾದ ಅಡಿಕೆ ಪರಿಸ್ಥಿತಿ ಯಾರಿಗೂ ಬೇಡ. ಸದ್ಯ ಶೇ 25ರ ಪ್ರಮಾಣದಲ್ಲಿ ಅಡಿಕೆ ಹಣ್ಣಾಗಿದೆ. ಅವುಗಳಲ್ಲಿ ಕೆಲವು ನೆಲಕ್ಕೆ ಬೀಳುತ್ತಿದೆ. ಶಿರಸಿ ಭಾಗದಲ್ಲಿ ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಹಲವು ರೈತರು ಮೊದಲ ಹಂತದ ಗೋಟಡಿಕೆ ಕೊಯ್ಲು ಆರಂಭಿಸುತ್ತಿದ್ದರು. ಆದರೆ ಈ ಬಾರಿ ಮಾತ್ರ ನಿರಂತರ ಮಳೆಯ ಕಾರಣಕ್ಕೆ ಅಡಿಕೆ ಈಗಾಗಲೇ ಹಣ್ಣಾಗಿ ನೆಲಕ್ಕೆ ಬೀಳುತ್ತಿದ್ದು, ಕೊಯ್ಲು ಮಾಡದೇ ಬಿಡುವ ಹಾಗಿಲ್ಲ.
ಬಿಸಿಲು ಸರಿಯಾಗಿಲ್ಲದ ಕಾರಣ ಒಣ ಹಾಕಿದ ಅಡಿಕೆ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ. ಕಪ್ಪು ಬಣ್ಣದ ಚಾಲಿ ಪ್ರಮಾಣ ಹೆಚ್ಚಾಗುತ್ತಿದೆ. ತೋಟದಲ್ಲಿ ಉದುರಿದ ಹಣ್ಣಡಿಕೆ ಕನಿಷ್ಟ 20 ದಿನವಾದರೂ ಒಳ್ಳೆಯ ಬಿಸಿಲಿಗೆ ಬೇಯಬೇಕಿದ್ದು, ಸದ್ಯ ನಿರಂತರವಾಗಿ 20 ದಿನದ ಬಿಸಿಲು ಯಾವ ಊರಿನಲ್ಲಿಯೂ ಬಿದ್ದಿಲ್ಲ. ಕೆಲವರಲ್ಲಿ ಮಾತ್ರ ಪಾಲಿಹೌಸ್ ಹಾಗೂ ಡ್ರಯರ್ ವ್ಯವಸ್ಥೆಯಿದ್ದು, ಅವರನ್ನು ಬಿಟ್ಟು ಉಳಿದವರು ಅಡಿಕೆ ಒಣಗಿಸಲಾಗದೇ ಕಂಗಾಲಾಗಿದ್ದಾರೆ.