ಸಿದ್ದಾಪುರದಲ್ಲಿ ಪುರೋಹಿತರಾಗಿರುವ ಬಾಲಕೃಷ್ಣ ಭಟ್ಟರು ತಮ್ಮ 32ನೇ ವಯಸ್ಸಿನಲ್ಲಿಯೇ ದುಶ್ಚಟಗಳಿಗೆ ದಾಸರಾಗಿದ್ದಾರೆ. ಮಾದಕ ವಸ್ತು ಸೇವಿಸಿ ಅಲೆದಾಡುತ್ತಿದ್ದ ಅವರನ್ನು ಪೊಲೀಸರು ಹಿಡಿದಿದ್ದಾರೆ.
ಸಿದ್ದಾಪುರದ ಕ್ಯಾದಗಿ ಬಳಿಯ ಹೆಬ್ಬಕುಳಿಯಲ್ಲಿ ಬಾಲಕೃಷ್ಣ ಸುಬ್ರಾಯ ಭಟ್ಟ ಅವರು ವಾಸವಾಗಿದ್ದಾರೆ. ಪುರೋಹಿತ್ಯ ಕೆಲಸ ಮಾಡಿ ಕಾಸು ಸಂಪಾದಿಸುವ ಅವರು ಬಿಡುವಿನ ವೇಳೆ ದುಶ್ಚಟಗಳ ಮೊರೆ ಹೋಗುತ್ತಾರೆ. ಅಕ್ಟೊಬರ್ 8ರಂದು ಅವರು ಗಾಂಜಾ ಸೇವಿಸಿ ಅನುಚಿತವಾಗಿ ವರ್ತಿಸುತ್ತಿರುವಾಗ ಸಿದ್ದಾಪುರ ಪೊಲೀಸ್ ಉಪನಿರೀಕ್ಷಕಿ ಗೀತಾ ಸಿರ್ಸಿಕರ್ ಅವರ ಬಳಿ ಸಿಕ್ಕಿಬಿದ್ದಿದ್ದಾರೆ.
ಸಿದ್ದಾಪುರ ಪಟ್ಟಣದ ಹೊಸೂರು-ಕುಮಟಾ ರಸ್ತೆಯಲ್ಲಿ ಗೀತಾ ಸಿರ್ಸಿಕರ್ ಅವರು ಸಂಚರಿಸುವಾಗ ಬಾಲಕೃಷ್ಣ ಭಟ್ಟರು ಅದೇ ರಸ್ತೆಯಲ್ಲಿ ಅಲೆದಾಡುತ್ತಿದ್ದರು. ಶಂಕರಮಠದ ಬಳಿ ಪೊಲೀಸರು ಅವರನ್ನು ಹಿಡಿದು ವಿಚಾರಣೆಗೆ ಒಳಪಡಿಸಿದರು. ಸಾರ್ವಜನಿಕ ರಸ್ತೆಯಲ್ಲಿ ಅಸಹಜ ವರ್ತನೆ ಗಮನಿಸಿ ಹಲವು ಪ್ರಶ್ನೆಗಳನ್ನು ಹಾಕಿದರು. ಮಾತನಾಡಲು ತೊದಲುತ್ತಿದ್ದ ಬಾಲಕೃಷ್ಣ ಭಟ್ಟರು ಕೊನೆಗೆ ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡರು.
ನಶೆಯಲ್ಲಿ ಗಲಾಟೆ ಮಾಡುವ ಸಾಧ್ಯತೆ ಹಿನ್ನಲೆ ಪೊಲೀಸರು ಅವರನ್ನು ವಶಕ್ಕೆಪಡೆದರು. ಸಾರ್ವಜನಿಕರಿಗೆ ಉಪಟಳ ನೀಡದಂತೆ ತಡೆಯುವುದಕ್ಕಾಗಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ತಂದು ಕೂರಿಸಿದರು. ಅಲ್ಲಿನ ವೈದ್ಯರು ಬಾಲಕೃಷ್ಣ ಭಟ್ಟರನ್ನು ಪರೀಕ್ಷೆ ಮಾಡಿ, ಅವರು ಗಾಂಜಾ ಸೇವಿಸಿದನ್ನು ದೃಢಪಡಿಸಿದರು. ಹೀಗಾಗಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.