ಹೊನ್ನಾವರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಮೂಲಕ ಬೈಕ್ ದಾಟಿಸುತ್ತಿದ್ದ ವಸಂತ ಗೌಡ ಅವರಿಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಅಕ್ಟೊಬರ್ 12ರ ಸಂಜೆ ಮಾವಿನಕಟ್ಟಾ ಮೂಲದ ವಸಂತ ದೇವು ಗೌಡ ಅವರು ಬೈಕಿನಲ್ಲಿ ಹೊರಟಿದ್ದರು. ತರಾತುರಿಯಲ್ಲಿ ಮಂಕಿಗೆ ಹೋಗಬೇಕಿದ್ದ ಅವರು ಇಡಗುಂಜಿ ತಿರುವಿನ ಬಳಿಯಿರುವ ಡಿವೈಡರ್ ಸಂದಿಯಲ್ಲಿ ಅವರು ಬೈಕ್ ನುಗ್ಗಿಸಿದ್ದರು. ಈ ವೇಳೆ ಹೊನ್ನಾವರದಿಂದ ಉಡುಪಿ ಕಡೆ ಶೃಂಗೇರಿಯ ಸಂಕೇತ ಕೊಪ್ಪ ಅವರು ಕಾರು ಓಡಿಸುತ್ತಿದ್ದರು. ಆ ಕಾರು ವಸಂತ ಗೌಡ ಅವರ ಬೈಕಿಗೆ ಬಡಿಯಿತು.
ಪರಿಣಾಮ ಬೈಕಿನ ಜೊತೆ ವಸಂತ ಗೌಡ ಅವರು ನೆಲಕ್ಕೆ ಬಿದ್ದರು. ಈ ಅಪಘಾತದಲ್ಲಿ ಬೈಕು ಜಖಂ ಆಯಿತು. ಕಾರಿನ ಮುಂಬಾಗವೂ ಒಡೆಯಿತು. ವಸಂತ ಗೌಡ ಅವರಿಗೆ ಪೆಟ್ಟಾಗಿದ್ದು, ಕಾಲಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು. ಅಲ್ಲಿದ್ದ ಜನ ವಸಂತ ಗೌಡ ಅವರನ್ನು ಹೊನ್ನಾವರ ಆಸ್ಪತ್ರೆಗೆ ದಾಖಲಿಸಿದರು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಕಿಮ್ಸ್’ಗೆ ಕಳುಹಿಸಿದರು.
ಈ ಅಪಘಾತವನ್ನು ಮಾವಿನಕಟ್ಟಾದ ಪ್ರಮೋದ ಈಶ್ವರ ನಾಯ್ಕ ಅವರು ನೋಡಿದರು. ಬೈಕ್ ಸವಾರನ ಜೊತೆ ಕಾರು ಚಾಲಕನದ್ದು ತಪ್ಪಿರುವ ಬಗ್ಗೆ ಅವರು ಪೊಲೀಸರಿಗೆ ತಿಳಿಸಿದರು. ಹೀಗಾಗಿ ಮಂಕಿ ಪೊಲೀಸರು ವಸಂತ ದೇವು ಗೌಡ ಜೊತೆ ಸಂಕೇತ ಕೊಪ್ಪ ಅವರ ವಿರುದ್ಧವೂ ಪ್ರಕರಣ ದಾಖಲಿಸಿದರು.