ಕಾರವಾರದ ಸದಾಶಿವಗಡದಲ್ಲಿ ಭೂಮಿ ಹಾಗೂ ರಸ್ತೆ ವಿಷಯವಾಗಿ ಗಡಿ ಜಗಳ ನಡೆಯುತ್ತಿದೆ. ಈ ಸಮಸ್ಯೆ ಪರಿಶೀಲನೆಗೆ ಜನಪ್ರತಿನಿಧಿ-ಅಧಿಕಾರಿಗಳು ತೆರಳಿದಾಗ ಕಲ್ಲು ತೂರಾಟ ನಡೆದಿದ್ದು, ಸಾರ್ವಜನಿಕೊರೊಬ್ಬರ ತಲೆಗೆ ಪೆಟ್ಟಾಗಿದೆ.
ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನಿರಿಸಿ ಸಮಸ್ಯೆ ಮಾಡಿದ ಕುಟುಂಬವೊoದರ ವಿರುದ್ಧ ಚಿತ್ತಾಕುಲ ಪಿಡಿಓ ರಾಮದಾಸ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ. ಅದೇ ಕುಟುಂಬದವರ ವಿರುದ್ಧ ಕಲ್ಲು ತಾಗಿ ಗಾಯಗೊಂಡ ಸದಾಶಿವಗಡ ಬಿಡ್ತುಲಭಾಗದ ಗೂಡ್ಸ ಆಟೋ ಚಾಲಕ ವಸಂತ ಸಾಳಸ್ಕರ್ ಸಹ ದೂರು ನೀಡಿದ್ದಾರೆ. ಈ ಎರಡು ಪ್ರಕರಣ ದಾಖಲಿಸಿಕೊಂಡ ಚಿತ್ತಾಕುಲ ಪೊಲೀಸರು ಸದಾಶಿವಗಡ ದೇಸಾಯಿವಾಡದ ದೀಪಕಕುಮಾರ ನಾಯ್ಕ, ಅವರ ಪತ್ನಿ ರಾಜಶ್ರೀ ನಾಯ್ಕ, ಮಕ್ಕಳಾದ ವಿಶಾಲ ನಾಯ್ಕ ಹಾಗೂ ಪ್ರಾಚಿ ನಾಯ್ಕ ವಿರುದ್ಧ ತನಿಖೆ ಶುರು ಮಾಡಿದ್ದಾರೆ.
ದೇಸಾಯಿವಾಡದಲ್ಲಿ ವಾಸವಾಗಿರುವ ಉರ್ಮಿಳಾ ವಿಶ್ವನಾಥ ನಾಯ್ಕ ಅವರು ತಾವು ಓಡಾಡುವ ರಸ್ತೆಗೆ ಅಡ್ಡಲಾಗಿ ದೀಪಕಕುಮಾರ ನಾಯ್ಕ ಕುಟುಂಬದವರು ಕಲ್ಲುಗಳನ್ನಿಡುವ ಬಗ್ಗೆ ಗ್ರಾಮ ಪಂಚಾಯತಗೆ ದೂರಿದ್ದರು. ಸಂಚಾರಕ್ಕೆ ತಡೆ ಒಡ್ಡುವ ಬಗ್ಗೆ ಅವರು ತಕರಾರು ಸಲ್ಲಿಸಿದ್ದರು. ಅದರ ಪ್ರಕಾರ ಅಕ್ಟೊಬರ್ 24ರಂದು ಗ್ರಾಮ ಪಂಚಾಯತ ಪಿಡಿಓ ಜೊತೆ ಅಧ್ಯಕ್ಷ-ಉಪಾಧ್ಯಕ್ಷರು ಸ್ಥಳ ಪರಿಶೀಲನೆಗೆ ಹೋಗಿದ್ದರು. ಈ ವೇಳೆ `ಆ ಮಣ್ಣಿನ ರಸ್ತೆ ನಮಗೆ ಸೇರಿದ್ದು’ ಎಂದು ದೀಪಕಕುಮಾರ ಕುಟುಂಬದವರು ಗಲಾಟೆ ಮಾಡಿದರು. ಉರ್ಮಿಳಾ ನಾಯ್ಕ ಅವರ ಜೊತೆ ಅವರ ಮಕ್ಕಳಾದ ಪ್ರಕಾಶ, ರಥಿ ಸೇರಿ ಕಲ್ಲು ತೆಗೆಯುವ ಪ್ರಯತ್ನ ಮಾಡಿದಾಗ ಕಲ್ಲು ತೂರಾಟ ನಡೆಸಿದರು.
ಈ ಕಲ್ಲು ಉರ್ಮಿಳಾ ನಾಯ್ಕ ಅವರ ಅಣ್ಣ ವಸಂತ ಸಾಳಸ್ಕರ್ ಅವರಿಗೆ ತಾಗಿತು. ಗಾಯಗೊಂಡ ಅವರು ಆಸ್ಪತ್ರೆ ಸೇರಿ ಚಿಕಿತ್ಸೆಪಡೆದರು. ಪಿಡಿಓ ರಾಮದಾಸ ನಾಯ್ಕ ಹಾಗೂ ವಸಂತ ಸಾಳಸ್ಕರ್ ಅವರು ನೀಡಿದ ದೂರು ಸ್ವೀಕರಿಸಿದ ಪೊಲೀಸರು ದೀಪಕಕುಮಾರ ನಾಯ್ಕ ಅವರ ಕುಟುಂಬದ ಮೇಲೆ ಪ್ರಕರಣ ದಾಖಲಿಸಿದ್ದಾರೆ.