ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಗೆ ಶಿಕ್ಷಕರನ್ನು ನಿಯೋಜಿಸಿದ ಕಾರಣ ಅಕ್ಟೊಬರ್ 18ರವರೆಗೂ ಶಾಲೆಗಳಿಗೆ ರಜೆ ಘೋಷಿಸಿ ಸರ್ಕಾರ ನಿರ್ಧಾರ ಪ್ರಕಟಿಸಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಈ ರಜೆ ಅನ್ವಯ ಆಗಲಿದೆ.
ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಅಕ್ಟೊಬರ್ 7ರಂದು ಮುಗಿಯಬೇಕಿತ್ತು. ಅಕ್ಟೊಬರ್ 8ರಿಂದ ಶಾಲೆಗಳು ಶುರುವಾಗಬೇಕಿತ್ತು. ಆದರೆ, ಈವರೆಗೂ ಸಮೀಕ್ಷೆ ಪೂರ್ಣವಾಗದ ಕಾರಣ ಶಾಲೆಗಳ ರಜಾ ಅವಧಿ ವಿಸ್ತರಿಸಲಾಗಿದೆ. ಸಂಪುಟ ಸಹೋದ್ಯೋಗಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚಿಸಿ ಶಾಲೆ ರಜೆಯ ಅವಧಿ ವಿಸ್ತರಿಸಿದ್ದಾರೆ. `ಕೆಲವು ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯ ಮುಗಿದಿದೆ. ಇನ್ನೂ ಕೆಲವು ಕಡೆ ಮುಗಿದಿಲ್ಲ. ಶಿಕ್ಷಕರ ಮನವಿ ಮೇರೆಗೆ ರಜೆ ಘೋಷಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಾವನಪ್ಪಿದವರ ಕುಟುಂಬಕ್ಕೆ ಪರಿಹಾರ
`ರಾಜ್ಯದಲ್ಲಿ 1.20 ಲಕ್ಷ ಶಿಕ್ಷಕರು ಸಮೀಕ್ಷೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ ಸಹ ಇದೇ ಅವಧಿಯಲ್ಲಿ ನಡೆಯುತ್ತಿದ್ದು, ಪರೀಕ್ಷಾ ಕಾರ್ಯದಲ್ಲಿ ತೊಡಗಿದವರಿಗೆ ಸಮೀಕ್ಷೆಯಲ್ಲಿ ವಿನಾಯತಿ ನೀಡಲಾಗಿದೆ. ರಜೆ ವಿಸ್ತರಣೆ ಹಿನ್ನಲೆ 12 ದಿನ ಸಮೀಕ್ಷೆಗೆ ಅವಕಾಶ ಸಿಗಲಿದ್ದು, ಅಕ್ಟೋಬರ್ 18ರೊಳಗೆ ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ಮುಗಿಸಬೇಕು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. `ಸಮೀಕ್ಷೆ ಕಾರ್ಯಕ್ಕೆ ಹಿಂದೇಟು ಹಾಕಿದವರಿಗೆ ಶಿಕ್ಷೆ ವಿಧಿಸಲಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ. `ಸರ್ವೆ ಕಾರ್ಯದಲ್ಲಿ ಮೂವರು ಸಾವನಪ್ಪಿದ್ದು, ಅವರ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ಕೊಡುತ್ತೇವೆ’ ಎಂದು ಸೀಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಪ್ರಗತಿ
ಸೋಮವಾರ ಸಂಜೆಯ ಮಾಹಿತಿ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ 282838 ಮನೆಗಳ ಸಮೀಕ್ಷೆ ಮುಗಿದಿದೆ. ಹೀಗಾಗಿ ಈ ಸಮೀಕ್ಷಾ ಕಾರ್ಯದಲ್ಲಿ ಶೇ 86.53ರಷ್ಟು ಪ್ರಗತಿ ಆಗಿದೆ.