ಜನಪರ ಜಿಲ್ಲಾಧಿಕಾರಿ ಎಂದು ಗುರುತಿಸಿಕೊಂಡಿರುವ ಕೆ ಲಕ್ಷ್ಮೀಪ್ರಿಯಾ ಅವರು ಜನ ಸಾಮಾನ್ಯರ ಬಗ್ಗೆ ಕಾಳಜಿವಹಿಸಿಲ್ಲ ಎಂದು ದೂರಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ದೂರಿದ್ದಾರೆ. ವಿವಿಧ ದಾಖಲೆಗಳ ಜೊತೆ ಅವರು ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಕುಮಟಾದ ಗುಜರಗಲ್ಲಿಯಲ್ಲಿ ವಾಸವಾಗಿರುವ 64 ವರ್ಷದ ವಿಮಲಾ ಶಿರಾಲಿ ಅವರು ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದಾಗ ಲಕ್ಷಾಂತರ ರೂ ಬಿಲ್ ಆಗಿತ್ತು. ಈ ವಿಷಯ ಅರಿತ ಅವರ ಸಂಬoಧಿಕರು ಅವರ ಬ್ಯಾಂಕ್ ಖಾತೆಗೆ ಹಣ ಹಾಕಿ ಸಹಾಯ ಮಾಡಿದ್ದರು. ಅವರ ಬ್ಯಾಂಕ್ ಖಾತೆಯಲ್ಲಿ ಹೆಚ್ಚಿನ ಮೊತ್ತ ಜಮಾ ಆದ ಆಧಾರದಲ್ಲಿ ಅಧಿಕಾರಿಗಳು ವಿಮಲಾ ಅವರ ಆದಾಯ ಹೆಚ್ಚಿರುವ ಬಗ್ಗೆ ವರದಿ ಸಲ್ಲಿಸಿದ ಕಾರಣ ಅವರಿಗೆ ಪಿಂಚಣಿ ಯೋಜನೆಯಿಂದ ದೂರ ಮಾಡಿದ್ದರು.
ಇಂದಿರಾಗಾoಧಿ ವೃದ್ದಾಪ್ಯ ವೇತನ ಬಾರದ ಕಾರಣ ವಿಮಲಾ ಶಿರಾಳಿ ಅವರು ಅಲೆದಾಡುತ್ತಿದ್ದಾರೆ. ಸರ್ಕಾರದಿಂದ ಪಿಂಚಣಿ ಸಿಗದ ಬಗ್ಗೆ ಅವರು ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದಿದ್ದು, 4 ತಿಂಗಳ ಒಳಗೆ ಈ ಪ್ರಕರಣ ಬಗೆಹರಿಸುವಂತೆ ಮಾನವ ಹಕ್ಕು ಆಯೋಗ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ. ಆದರೆ, ಆ ಅವಧಿ ಮುಗಿದರೂ ವಿಮಲಾ ಶಿರಾಲಿ ಅವರಿಗೆ ಸರ್ಕಾರದ ಪಿಂಚಣಿ ಸಿಕ್ಕಿಲ್ಲ. ಮೇ 5ರ ಒಳಗೆ ಬಗೆಹರಿಯಬೇಕಿದ್ದ ಪ್ರಕರಣ ಈವರೆಗೂ ಬಗೆಹರಿದಿಲ್ಲ.
ಈ ಹಿನ್ನಲೆ ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಡೀಸಿ ಲಕ್ಷ್ಮೀಪ್ರಿಯಾ ಅವರ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದಿದ್ದಾರೆ. ವಿಮಲಾ ಅವರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ನೇಲ್ ರೋಡ್ರಿಗಸ್ ಹಾಗೂ ಸುಧಾಕರ ನಾಯ್ಕ ಅವರು ಆಯೋಗದ ಬಳಿ ಮನವಿ ಮಾಡಿದ್ದಾರೆ.