ಅರಣ್ಯ ಇಲಾಖೆಯಲ್ಲಿ ನಡೆದ ಅಕ್ರಮ, ಅವ್ಯವಹಾರದ ತನಿಖೆ ಜೊತೆ ಅರಣ್ಯಾಧಿಕಾರಿಗಳ ದಬ್ಬಾಳಿಕೆಗೂ ಕಡಿವಾಣ ಹಾಕುವಂತೆ ಜೊಯಿಡಾದ ಜನ ಆಗ್ರಹಿಸಿದ್ದಾರೆ. ಕುಂಬಾರವಾಡಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಜಮಾಯಿಸಿದ ಜನ ತಮ್ಮ ಬೇಡಿಕೆ ಈಡೇರದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
`ಅಕ್ಟೊಬರ್ 30ರ ಒಳಗೆ ತಹಶೀಲ್ದಾರ್ ಮಧ್ಯಸ್ಥಿಕೆಯಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಹೋರಾಟಗಾರರ ಸಭೆ ನಡೆಯಬೇಕು. ಇಲ್ಲವಾದಲ್ಲಿ ದಾಂಡೇಲಿ ಡಿಎಫ್‌ಓ ಕಚೇರಿ ಎದುರು ಉಗ್ರ ಹೊರಾಟ ನಡೆಸುತ್ತೇವೆ’ ಎಂದು ಅಲ್ಲಿನವರು ಹೇಳಿದ್ದು, ಸಭೆ ನಡೆಸುವ ಭರವಸೆ ಹಿನ್ನಲೆ ಬುಧವಾರದ ಹೋರಾಟವನ್ನು ಹಿಂಪಡೆದಿದ್ದಾರೆ. `ಅರಣ್ಯ ಇಲಾಖೆ ದೌರ್ಜನ್ಯ ಹಾಗೂ ಪ್ಯಾಕೇಜ್ ವಿಷಯದಲ್ಲಿ 152 ಕೋಟಿ ಹಗರಣ ನಡೆದಿದ್ದು, ಆ ಬಗ್ಗೆ ಸಮಗ್ರ ತನಿಖೆ ನಡೆಯಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕುಣಬಿ ಸಮಾಜ ಜಿಲ್ಲಾ ಅಧ್ಯಕ್ಷ ಸುಭಾಷ ಗಾವಡಾ ಮಾತನಾಡಿ `ಈ ಕಾಡು, ಜಮೀನು ಜನರ ಹಕ್ಕು. ಇದನ್ನು ಮೊಟಕುಗೊಳಿಸುವ ಹುನ್ನಾರ ಸಹಿಸುವುದಿಲ್ಲ. ಪರಿಸರ ರಕ್ಷಣೆ ಸ್ಥಳೀಯರ ರಕ್ತದಲ್ಲಿದ್ದು, ಸರ್ಕಾರಿ ಹಣ ದುರುಪಯೋಗ ಸಹಿಸುವುದಿಲ್ಲ’ ಎಂದರು. `ಬಿಎಸ್‌ಎನ್‌ಎಲ್ ನೆಟವರ್ಕ ಸ್ಥಾಪನೆಗೆ ಸಹ ಅರಣ್ಯ ಇಲಾಖೆ ತೊಂದರೆ ಮಾಡುತ್ತಿದೆ’ ಎಂದು ದತ್ತಾರಾಮ ದೇಸಾಯಿ ದೂರಿದರು. ಕೃಷಿ ಸಮಾಜದ ಜಿಲ್ಲಾಧ್ಯಕ್ಷ ಗೋಪಾಲ ಭಟ್ ಮಾತನಾಡಿ `ಅರಣ್ಯ ಹಕ್ಕು ಕಾಯ್ದೆಯ ಸಾಮುದಾಯಿಕ ಹಕ್ಕು ಜಾರಿ ಮಾಡಿದರೆ ಇಲ್ಲಿ ಅರಣ್ಯ ಇಲಾಖೆಯೇ ಇರುವುದಿಲ್ಲ. ಜನರ ಪರವಾಗಿರುವ ಕಾನೂನಿನಲ್ಲಿ ಜನ ಹಕ್ಕು ಕೇಳಿಪಡೆಯಬೇಕಾಗಿದ್ದು, ಜನಪ್ರತಿನಿಧಿಗಳು ಜನಪರವಾಗಿರಬೇಕು’ ಎಂದರು.
`ಅರಣ್ಯ ರಕ್ಷಕರು ಜನರ ಮನೆಗೆ ನುಗ್ಗಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಅರಣ್ಯ ಇಲಾಖೆಯವರಿಂದಲೇ ಕಾಡು ನಾಶವಾಗುತ್ತಿದೆ’ ಎಂದು ಪ್ರತಿಭಟನಾಕಾರರು ಕೆಲ ನಿದರ್ಶನಗಳನ್ನು ನೀಡಿದರು. `ಕಾಳಿ ಹುಲಿ ಯೋಜನೆ ವ್ಯಾಪ್ತಿಯಲ್ಲಿ ವಾಸಿಸುವ ಮೂಲನಿವಾಸಿಗಳಿಗೆ ಅಧಿಕಾರಿಗಳು ಅನಗತ್ಯ ತೊಂದರೆ ಮಾಡುತ್ತಿದ್ದಾರೆ. ಬೇರೆ ಬೇರೆ ಭಾಗದ ಕರಡಿ, ಹುಲಿಗಳನ್ನು ಇಲ್ಲಿ ಬಿಟ್ಟು ಜನರಲ್ಲಿ ಭಯ ಹುಟ್ಟಿಸಲಾಗುತ್ತಿದೆ’ ಎಂದು ದೂರಿದರು.