ದಾಂಡೇಲಿಯ ಮಿರಾಶಿಗಲ್ಲಿಯಲ್ಲಿ ವಿಜಯ ದಶಮಿ ದಿನ ನಡೆಯುವ ದಾಂಡೇಲಪ್ಪ ಜಾತ್ರೆಗೆ ನಿರೀಕ್ಷೆಗೂ ಮೀರಿ ಜನ ಬಂದಿದ್ದಾರೆ. ಭಕ್ತರು ದೇವರ ದರ್ಶನ ಮಾಡಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದ್ದಾರೆ.
ಜಾತ್ರೆ ಅಂಗವಾಗಿ ಗುರುವಾರ ಬೆಳಗ್ಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಹಾಲಮಟ್ಟಿ ದೇವಸ್ಥಾನದಲ್ಲಿ ಸುಮಂಗಲಿಯರ ಪೂರ್ಣ ಕುಂಭದ ಜೊತೆ ಮೆರವಣಿಗೆ ಸಾಗಿತು. ನಂತರ ಪೂಜೆ ಸಲ್ಲಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಹಳಿಯಾಳ ರಸ್ತೆಯ ಮೂರನೇ ನಂಬರ್ ಗೇಟಿನ ಹಾಲಮಡ್ಡಿ ರಸ್ತೆಯ ಇಕ್ಕಲಗಳಲ್ಲಿ ಬಗೆ ಬಗೆಯ ಆಟಕ್ಕೆ ಹಾಗೂ ದಿನಸಿ ಅಂಗಡಿಗಳು ಬಂದಿದ್ದವು. ಅಲ್ಲಿನ ಮಳಿಗೆಗಳು ಜಾತ್ರೆಯ ಸಂಭ್ರಮ ಹೆಚ್ಚಿಸಿದವು. ಆಗಮಿಸಿದ ಭಕ್ತರಿಗೆ ವಿವಿಧ ಸಂಘಟನೆಯವರು ಉಪಚರಿಸಿದರು. ದಿನವಿಡೀ ಭಕ್ತರಿಗೆ ತಿಂಡಿ ತಿನಿಸು ಪಾನೀಯ ಹಾಗೂ ಮಹಾಪ್ರಸಾದ ವಿತರಣೆ ನಡೆಯಿತು.
ಜಾತ್ರೆ ಅಂಗವಾಗಿ ಬುಧವಾರ ಬೆಳಗ್ಗೆಯೇ ಭಕ್ತರು ಕ್ಷೇತ್ರಕ್ಕೆ ಬಂದಿದ್ದರು. ಸಾಲಿನಲ್ಲಿ ನಿಂತ ಜನ ದೇವರಿಗೆ ಹಣ್ಣು-ಹಂಪಲು ಅರ್ಪಿಸಿ ಬೇಡಿಕೊಂಡರು. ಹರಕೆ ಹೊತ್ತ ಭಕ್ತರು ತಮ್ಮ ಹರಕೆ ತೀರಿಸಿದರು. ಅದಾದ ನಂತರ ದೇವಸ್ಥಾನದ ಸುತ್ತಲೂ ದಿಂಡ ನಮಸ್ಕಾರ ಹಾಕಿ ತುಲಾಭಾರ ಸೇವೆ ಮಾಡಿದರು.
ಬೇರೆ ಬೇರೆ ಧರ್ಮದವರು ಸಹ ಈ ಉತ್ಸವದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಹೊರ ರಾಜ್ಯದ ಸಾವಿರಾರು ಭಕ್ತರು ಜಾತ್ರೆಯಲ್ಲಿ ಕಾಣಿಸಿಕೊಂಡರು.