ಲೈಟ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶದಿಂದ ಆಘಾತಕ್ಕೆ ಒಳಗಾಗಿದ್ದ ಹಳಿಯಾಳದ ಶಿವಾಜಿ ಮಿರಾಶಿ ಅವರನ್ನು ಆಸ್ಪತ್ರೆಗೆ ದಾಖಲಾದರೂ ಪ್ರಯೋಜನವಾಗಿಲ್ಲ. 13 ದಿನಗಳ ಚಿಕಿತ್ಸೆಯ ನಂತರವೂ ಅವರು ಚೇತರಿಸಿಕೊಳ್ಳದೇ ಸಾವನಪ್ಪಿದ್ದಾರೆ.
ಹಳಿಯಾಳದ ಮುಂಡವಾಡದಲ್ಲಿ ಶಿವಾಜಿ ಮಿರಾಶಿ (50) ಅವರು ವಾಸವಾಗಿದ್ದರು. ರೈತರಾಗಿ ದುಡಿಯತ್ತಿದ್ದ ಅವರು ಸಣ್ಣಪುಟ್ಟ ಮನೆ ಕೆಲಸಗಳನ್ನು ತಾವೇ ನಿಭಾಯಿಸುತ್ತಿದ್ದರು. ಅಕ್ಟೊಬರ್ 8ರಂದು ಅವರು ತಮ್ಮ ಮನೆ ಮೀಟರ್ ಬಳಿ ಲೈಟ್ ಅಳವಡಿಸುವಾಗ ಅವಘಡ ನಡೆಯಿತು.
ಕೇಬಲಿನಿಂದ ಬಂದ ವಿದ್ಯುತ್ ಶಿವಾಜಿ ಮಿರಾಶಿ ಅವರ ಕೈಗೆ ತಾಗಿದ್ದು, ಅವರು ಅಲ್ಲಿಯೇ ಕುಸಿದು ಬಿದ್ದರು. ವಿದ್ಯುತ್ ಆಘಾತಕ್ಕೆ ಒಳಗಾಗಿದ್ದ ಶಿವಾಜಿ ಮಿರಾಶಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅವರನ್ನು ಬದುಕಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಯಿತು.
ಅಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಶಿವಾಜಿ ಮಿರಾಶಿ ಅವರಿಗೆ ಚಿಕಿತ್ಸೆ ಮುಂದುವರೆಯಿತು. ಆದರೆ, 13 ದಿನದ ಪ್ರಯತ್ನಿಸಿದರೂ ಅವರು ಚೇತರಿಸಿಕೊಳ್ಳಲಿಲ್ಲ. ಅಕ್ಟೊಬರ್ 20ರ ರಾತ್ರಿ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿಯೇ ಶಿವಾಜಿ ಮಿರಾಶಿ ಅವರು ಸಾವನಪ್ಪಿದರು. ಅವರ ಮಗ ಮಂಜುನಾಥ ಮಿರಾಶಿ ಅವರು ಹಳಿಯಾಳ ಪೊಲೀಸ್ ಠಾಣೆಗೆ ಈ ಮಾಹಿತಿ ನೀಡಿ ಪ್ರಕರಣ ದಾಖಲಿಸಿ, ಶವಪಡೆದರು.






