ಯಲ್ಲಾಪುರದಲ್ಲಿ ಹಣ್ಣು-ಕಾಯಿ ಮಾರಾಟ ಮಾಡಿಕೊಂಡಿದ್ದ ದೊಡ್ಡಬೇಣದ ಶಿವಾನಂದ ಮರಾಠಿ ಅವರ ಮಳಿಗೆಗೆ ಬೆಂಕಿ ಬಿದ್ದಿದೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಆ ಬೆಂಕಿ ಆರಿಸಿದ್ದಾರೆ.
ಯಲ್ಲಾಪುರದ ಐಬಿ ರಸ್ತೆಯ ಪಕ್ಕದಲ್ಲಿ ಶಿವಾನಂದ ಮರಾಠಿ ಅವರು ಕೃಷಿ ಗೋಡೌನ್ ಹೊಂದಿದ್ದರು. ಅವರು ರೈತರಿಂದ ಕಾಯಿ-ಪಲ್ಲೆ ಖರೀದಿಸಿ ಅದನ್ನು ಅಗತ್ಯವಿದ್ದವರಿಗೆ ಪೂರೈಸುತ್ತಿದ್ದರು. ತಮ್ಮ ಗೋದಾಮಿನಲ್ಲಿ ತೆಂಗಿನಕಾಯಿಗಳನ್ನು ಅವರು ದಾಸ್ತಾನು ಮಾಡಿದ್ದರು. ಜೇನುತುಪ್ಪ, ಅಡಿಕೆ ಹಾಳೆ ಪ್ಲೇಟುಗಳನ್ನು ಸಹ ಅವರು ಮಾರಾಟ ಮಾಡುತ್ತಿದ್ದರು.
ಶನಿವಾರ ನಸುಕಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಅವರ ಗೋದಾಮಿಗೆ ಅಗ್ನಿ ಸ್ಪರ್ಶವಾಯಿತು. ಅಲ್ಲಿ ಬೆಂಕಿ ಉರಿದ ಪರಿಣಾಮ ಗೋದಾಮಿನಲ್ಲಿದ್ದ 10 ಸಾವಿರ ಅಡಕೆ ಹಾಳೆಯ ಪ್ಲೇಟುಗಳು, 80 ಲೀಟರ್ ಜೇನುತುಪ್ಪ, ಲೋಟ-ಚಮಚ, ಅಗರಬತ್ತಿಗಳು ನಾಶವಾದವು. ಇದರೊಂದಿಗೆ 6 ಕ್ವಿಂಟಲ್ ಬಾಳೆಕಾಯಿ, 1 ಟನ್ ಬರಡು ತೆಂಗಿನ ಕಾಯಿಗಳು ಅಗ್ನಿಗೆ ಆಹುತಿಯಾದವು.
ಈ ವಿದ್ಯುತ್ ಅವಘಡದಿಂದ ಶಿವಾನಂದ ಮರಾಠಿ ಅವರಿಗೆ ಲಕ್ಷಾಂತರ ರೂ ನಷ್ಟವಾಗಿದೆ. ಅಗ್ನಿಶಾಮಕ ದಳದ ಎಫ್ ಎಸ್ ಒ ಶಂಕರಪ್ಪ ಅಂಗಡಿ, ಸಿಬ್ಬಂದಿ ಪ್ರಣಯ ಕೊಚ್ರೆಕರ್, ನಾಗರಾಜ ನಾಯಕ, ಅಮಿತ್ ಗುನಗಿ, ಸಲೀಂ ನದಾಫ, ಶಿವಾನಂದ ಕೋಡಿ ಬೆಂಕಿ ಆರಿಸಿದರು.