`ಕುಮಟಾದಲ್ಲಿ 72 ವರ್ಷದ ರಾಧಾ ಆಚಾರಿ ಅವರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಅರಿಯದೇ ಅಧಿಕಾರಿಗಳು ಅವರಿಗೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಈ ಅನ್ಯಾಯದ ವಿರುದ್ಧ ಹೋರಾಟ ಅನಿವಾರ್ಯ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಆಗ್ನೇಲ್ ರೋಡ್ರಿಗಸ್ ಹೇಳಿದ್ದಾರೆ. `ಅಧಿಕಾರಿಗಳು ನೈಜ ಪರಿಸ್ಥಿತಿ ಗಮನಿಸದೇ ವೃದ್ಧೆಗೆ ಸಂದ್ಯಾ ಸುರಕ್ಷಾ ಯೋಜನೆ ಸಿಗದಂತೆ ಮಾಡಿದ್ದಾರೆ’ ಎಂದವರು ದೂರಿದ್ದಾರೆ.
`ರಾಧಾ ಆಚಾರಿ ಅವರು ಸಂದ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕಾಗಿ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಿದ್ದರು. ಆದರೆ, ಅಧಿಕಾರಿಗಳು ಅವರಿಗಿರುವ ಆದಾಯಕ್ಕಿಂತಲೂ ಹೆಚ್ಚಿನ ಮೊತ್ತ ನಮೂದಿಸಿ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಸದ್ಯ ಗೃಹಲಕ್ಷ್ಮಿ ಹಣ ಬಿಟ್ಟು ಬೇರೆ ಯಾವ ಆದಾಯವೂ ಈ ಕುಟುಂಬಕ್ಕಿಲ್ಲ. ಅದಾಗಿಯೂ ಕಂದಾಯ ನಿರೀಕ್ಷಕರು ಈ ವೃದ್ಧ ಕುಟುಂಬ ಗುಡಿ ಕೈಗಾರಿಕೆ ಮಾಡುವ ಬಗ್ಗೆ ಹೇಳಿದ್ದು, ಅದಕ್ಕೆ ದಾಖಲೆಗಳಿಲ್ಲ’ ಎಂದು ವಿವರಿಸಿದ್ದಾರೆ.
`ಕಂದಾಯ ನಿರೀಕ್ಷಕರು ನೀಡಿದ ವರದಿಗೆ ತಹಶೀಲ್ದಾರರು ಕಣ್ಮುಚ್ಚಿ ಸಹಿ ಮಾಡಿದ್ದಾರೆ. ಅರ್ಜಿದಾರರ ಪರಿಸ್ಥಿತಿ ನೋಡಿದರೆ ಕಂದಾಯ ನಿರೀಕ್ಷಕರ ವರದಿ ಸತ್ಯವಲ್ಲ ಎಂಬುದು ಅರಿವಾಗುತ್ತದೆ. ದಾಯಾದಿಗಳು ನೀಡಿದ ಹೇಳಿಕೆ ಆಧಾರದಲ್ಲಿ ಅಧಿಕಾರಿಗಳು ವೃದ್ಧೆಗೆ ಅನ್ಯಾಯ ಮಾಡಿದ್ದು, ಅನಾರೋಗ್ಯಕ್ಕೆ ಒಳಗಾಗಿರುವ ರಾಧಾ ಅವರು ಗುಡಿ ಕೈಗಾರಿಕೆ ಮಾಡಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ. `ಬಿಪಿ, ಶುಗರ್ ಸೇರಿ ವಿವಿಧ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ಅಂಥವರಿಗೆ ಅಧಿಕ ಆದಾಯವಿರುವ ಬಗ್ಗೆ ಅಧಿಕಾರಿಗಳು ಬರೆದಿದ್ದು, ತಹಶೀಲ್ದಾರರು ವೃದ್ಧೆಯ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕು’ ಎಂದು ಆಗ್ರಹಿಸಿದ್ದಾರೆ.
`ಎಕರೆಗಟ್ಟಲೆ ಭೂಮಿ ಹೊಂದಿದವರಿಗೆ ಕಡಿಮೆ ಆದಾಯವಿರುವ ಪ್ರಮಾನ ಪತ್ರ ಕೊಡಲಾಗುತ್ತದೆ. ಏನೂ ಆದಾಯ ಇಲ್ಲದವರಿಗೆ ಅನ್ಯಾಯ ಮಾಡಲಾಗುತ್ತಿದೆ. ತಹಶೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಅದರ ಪರಿಣಾಮ ಬಡವರ ಅನ್ನ ಕಸಿಯಲಾಗುತ್ತಿದೆ. ಈ ಬಗ್ಗೆ ಲೋಕಾಯುಕ್ತ ಕಚೇರಿಗೆ ದೂರು ನೀಡಲಾಗುತ್ತದೆ’ ಎಂದವರು ಹೇಳಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಅವರು ಇದಕ್ಕೆ ಧ್ವನಿಗೂಡಿಸಿದ್ದಾರೆ.