ಯಲ್ಲಾಪುರದ ಕಿರವತ್ತಿ ಜಯಂತಿನಗರದದಲ್ಲಿ ಪೊಲೀಸರ ಮುಂದೆಯೇ ಮಾರಾಮಾರಿ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಕದಡಿದ ಕಾರಣ ಎಂಟು ಜನರ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.
ಅಕ್ಟೊಬರ್ 3ರ ನಸುಕಿನ 1 ಗಂಟೆಗೆ ಪೊಲೀಸ್ ಸಿಬ್ಬಂದಿ ರಾಘವೇಂದ್ರ ಮೂಳೆ ಅವರು ಗಸ್ತು ತಿರುಗುತ್ತಿದ್ದರು. ಜಯಂತಿ ನಗರದ ಕನ್ನಡ ಶಾಲೆಯ ಬಳಿ ಅವರಿಗೆ ದೊಡ್ಡ ಗಲಾಟೆ ಕೇಳಿಸಿತು. ಹತ್ತಿರ ಹೋಗಿ ನೋಡಿದಾಗ ಅಲ್ಲಿ ಒಂದಷ್ಟು ಜನ ಹೊಡೆದಾಟ ನಡೆಸಿದ್ದರು. ರಾಘವೇಂದ್ರ ಮೂಳೆ ಅವರು ಆ ಹೊಡೆದಾಟ ತಪ್ಪಿಸಲು ಪ್ರಯತ್ನಿಸಿದರು. ಅವರ ಜೊತೆಗಿದ್ದ ಪೊಲೀಸ್ ಸಿಬ್ಬಂದಿ ಅಕ್ಷಯ ಮರಾಠಿ, ಪರಮೇಶ ಎಸ್ ಕೆ ಅವರು `ಹೊಡೆದಾಟ ನಡೆಸಬೇಡಿ’ ಎಂದು ಎಂದು ಬುದ್ದಿ ಹೇಳಿದರು. ಆದರೆ, ಅಲ್ಲಿದ್ದವರು ಪೊಲೀಸರ ಮಾತು ಕೇಳಲಿಲ್ಲ.
ಕೊನೆಗೆ ಪೊಲೀಸರು ಗದರಿಸಿದಾಗ ಆ ಎಂಟು ಜನ ಅಲ್ಲಿಂದ ಓಡಿ ಹೋದರು. ಅದನ್ನು ಸ್ಥಳೀಯ ಮುಖಂಡ ತೆಹಮತುಲ್ಲಾ ಅಬ್ಬಿಗೇರಿ ಅವರು ನೋಡಿದ್ದು, ಪೊಲೀಸರು ಅಬ್ಬಿಗೇರಿ ಅವರನ್ನು ಸಾಕ್ಷಿದಾರರನ್ನಾಗಿ ಮಾಡಿದರು. ಜೊತೆಗೆ ಕಿರವತ್ತಿಯ ಜಯಂತಿನಗರದ ಲಕ್ಷ್ಮಣ ಅಡಿವೆಪ್ಪ ಜಂಗಳಿ, ಅಡಿವೆಪ್ಪ ಲಕ್ಷ್ಮಣ ಜಂಗಳಿ, ಮಹೇಶ ಲಕ್ಷ್ಮಣ ಜಂಗಳಿ, ದ್ಯಾಮಣ್ಣ ಅಡಿವೆಪ್ಪ ಜಂಗಳಿ, ಮಂಜುನಾಥ ಸುರೇಶ ಸಿದ್ದಪ್ಪನವರ್, ಶಿವಾನಂದ ಬಸವಣ್ಣೆಪ್ಪ ರೊಟ್ಟಿಗೌಡರ್, ಅಭಿಷೇಕ ಮುದುಕಪ್ಪ ವರದಾನಿ, ನಿತೀನ ಕರಿಬಸಪ್ಪ ವರದಾನಿ ವಿರುದ್ಧ ಪ್ರಕರಣ ದಾಖಲಿಸಿದರು.