ಹಣಕಾಸು ವಿಷಯವಾಗಿ ಶಿರಸಿಯ ವರುಣ ಭಟ್ಟ ಹಾಗೂ ಮುಂಡಗೋಡಿನ ರಾಘವೇಂದ್ರ ನಾಯ್ಕ ನಡುವೆ ವೈಮನಸ್ಸು ಮೂಡಿದೆ. ಆಪ್ತ ಸ್ನೇಹಿತರಾಗಿದ್ದ ಅವರಿಬ್ಬರು ಇದೀಗ ಬೇರೆ ಬೇರೆಯಾಗಿದ್ದು, ಪರಸ್ಪರ ದ್ವೇಷ ಸಾಧಿಸುತ್ತಿದ್ದಾರೆ. ಇದೇ ವಿಷಯವಾಗಿ ವರುಣ ಭಟ್ಟ ಅವರು ಮುಂಡಗೋಡಿನಲ್ಲಿರುವ ರಾಘವೇಂದ್ರ ನಾಯ್ಕ ಅವರ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಇದನ್ನು ಸಹಿಸದ ರಾಘವೇಂದ್ರ ನಾಯ್ಕ ಅವರ ತಾಯಿ ಭಾಗೀರಥಿ ನಾಯ್ಕ ಅವರು ವರುಣ ಭಟ್ಟ ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಶಿರಸಿ ಬನವಾಸಿ ರಸ್ತೆಯ ಬಳಿ ವರುಣ ಮಧುಕೇಶ್ವರ ಭಟ್ಟ ಅವರು ವಾಸವಾಗಿದ್ದಾರೆ. ಮುಂಡಗೋಡು ನೆಹರು ನಗರದ ತಾಲೂಕು ಕ್ರೀಡಾಂಗಣದ ಬಳಿ ವಾಸವಾಗಿರುವ ರಾಘವೇಂದ್ರ ನಾಯ್ಕ ಅವರು ವರುಣ ಭಟ್ಟ ಅವರ ಬಾಲ್ಯ ಸ್ನೇಹಿತರಾಗಿದ್ದು, ಹಣಕಾಸಿನ ವಿಷಯವೊಂದು ಅವರಿಬ್ಬರ ಸ್ನೇಹವನ್ನು ಹಾಳು ಮಾಡಿದೆ. ಇದೇ ವಿಷಯವಾಗಿ ವರುಣ ಭಟ್ಟ ಅವರು ರಾಘವೇಂದ್ರ ನಾಯ್ಕ ಅವರ ಬಳಿ ಗಲಾಟೆ ಮಾಡಿದ್ದಾರೆ. ಅದರ ಮುಂದುವರೆದ ಭಾಗವಾಗಿ ವರುಣ ಭಟ್ಟ ಅವರು ರಾಘವೇಂದ್ರ ನಾಯ್ಕ ಅವರ ಮನೆಗೆ ನುಗ್ಗಿ ಅವರ ತಾಯಿ ಭಾಗೀರಥಿ ನಾಯ್ಕ ಅವರನ್ನು ನಿಂದಿಸಿದ್ದಾರೆ. ಜೊತೆಗೆ ಅವರನ್ನು ದೂಡಿ ನೆಲಕ್ಕೆ ಬೀಳಿಸಿದ್ದಾರೆ.
ಅಕ್ಟೊಬರ್ 21ರ ಮಧ್ಯಾಹ್ನ ವರುಣ ಭಟ್ಟ ಅವರು ಸಿಲ್ವರ್ ಬಣ್ಣದ ಕಾರಿನಲ್ಲಿ ಮುಂಡಗೋಡಿಗೆ ಹೋಗಿದ್ದಾರೆ. ಭಾಗೀರಥಿ ನಾಯ್ಕ ಅವರ ಮನೆಗೆ ನುಗ್ಗಿ `ರಾಘು ಎಲ್ಲಿ?’ ಎಂದು ಪ್ರಶ್ನಿಸಿದ್ದಾರೆ. `ನನಗೆ ಹಣ ಬೇಕು’ ಎಂದು ಬೊಬ್ಬೆ ಹೊಡೆದಿದ್ದಾರೆ. ಆಗ, ಭಾಗೀರಥಿ ನಾಯ್ಕ ಅವರು `ಮಗ ದೀಪಾವಳಿ ಪೂಜೆಗೆ ಹೋಗಿದ್ದಾನೆ’ ಎಂದು ಹೇಳಿದ್ದಾರೆ. ಇದರಿಂದ ಸಿಟ್ಟಾದ ವರುಣ ಭಟ್ಟ ಅವರು `ನೀನಾದರೂ ದುಡ್ಡು ಕೊಡು’ ಎಂದು ಬೇಡಿದ್ದಾರೆ. `ನನ್ನ ಬಳಿ ಹಣ ಇಲ್ಲ’ ಎಂದು ಭಾಗೀರಥಿ ಭಟ್ಟ ಅವರು ಹೇಳಿದಾಗ ಅವರಿಗೆ ಕೆಟ್ಟ ಶಬ್ದಗಳಿಂದ ಬೈದಿದ್ದಾರೆ.
`ಹಣ ಕೊಡದೇ ಇದ್ದರೆ ಯಾರನ್ನು ಜೀವಂತವಾಗಿ ಬಿಡುವುದಿಲ್ಲ’ ಎಂದು ವರುಣ ಭಟ್ಟ ಅವರು ಈ ವೇಳೆ ಬೆದರಿಸಿದ್ದಾರೆ. ಭಾಗೀರಥಿ ನಾಯ್ಕ ಅವರನ್ನು ನೆಲಕ್ಕೆ ದೂಡಿ ಅಲ್ಲಿಂದ ಹೊರಟಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಭಾಗೀರಥಿ ನಾಯ್ಕ ಅವರು ಮುಂಡಗೋಡು ಪೊಲೀಸ್ ಠಾಣೆಗೆ ತೆರಳಿ ವಿವರಿಸಿದ್ದು, ಮಹಿಳೆಯ ಮನೆಗೆ ನುಗ್ಗಿ ರಂಪಾಟ ನಡೆಸಿದ ವರುಣ ಭಟ್ಟ ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

