ಬೆಂಗಳೂರಿಗೆ ಹೋಗಿರುವ ಶಿರಸಿಯ ವಕೀಲ ರವೀಂದ್ರ ನಾಯ್ಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಅರಣ್ಯ ಅತಿಕ್ರಮಣದಾರರ ಸಮಸ್ಯೆಯ ಬಗ್ಗೆ ಅವರು ಗಮನಸೆಳೆದಿದ್ದಾರೆ.
ವಿಧಾನಸೌಧ ಪ್ರವೇಶಿಸಿದ ರವೀಂದ್ರ ನಾಯ್ಕ ಅವರು ಅಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ ಅವರನ್ನು ಮಾತನಾಡಿಸಿದರು. ಅದಾದ ನಂತರ ಅವರ ಜೊತೆಗೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿಯಾದರು. ಈ ವೇಳೆ `ಅರಣ್ಯವಾಸಿಗಳ ಭೂಮಿ ಹಕ್ಕಿನ ಸಮಸ್ಯೆಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದ್ದು, ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಸರ್ಕಾರ ಸಕ್ರಿಯೆವಾಗಿದೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪುನರ್ ಪರೀಶೀಲನಾ ಪ್ರಕ್ರಿಯೆ ಜರುಗಿಸದೇ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ತಿರಸ್ಕರಿಸಿದ ವರದಿ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾದ ಬಗ್ಗೆ ರವೀಂದ್ರ ನಾಯ್ಕ ಆಕ್ಷೇಪಿಸಿದರು. ಸಚಿವ ಸತೀಶ್ ಜಾರಕಿಹೊಳೆ, ಹೆಚ್ ಸಿ ಮಹದೇವಪ್ಪ ಅವರು `ಅರಣ್ಯವಾಸಿಗಳ ಪರ ಸರಕಾರ ನಿರ್ಧಾರ ಇರುತ್ತದೆ’ ಎಂಬ ಭರವಸೆ ನೀಡಿದರು. ಸಚಿವ ಮಂಕಾಳ ವೈದ್ಯ ಮತ್ತು ಯೋಜನಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಸಹ ಇದೇ ಮಾತು ಹೇಳಿದ ಬಗ್ಗೆ ರವೀಂದ್ರ ನಾಯ್ಕ ಅವರು ವಿವರಿಸಿದರು.