ಕಾರವಾರ-ಅಂಕೋಲಾ ಭಾಗದ ಕಡಲತೀರದಲ್ಲಿ ಬರಪೂರ ಮೀನು ಸಿಗುತ್ತಿದೆ. ರಾಶಿ ರಾಶಿ ಮೀನು ಕಡಲತೀರಕ್ಕೆ ಬಂದು ಬೀಳುತ್ತಿದ್ದು, ಅದನ್ನು ಆರಿಸಲು ನೂರಾರು ಜನ ಮುಗಿ ಬಿದ್ದಿದ್ದಾರೆ.
ಸಾಮಾನ್ಯವಾಗಿ ಯುಗಾದಿಯಿಂದ ದೀಪಾವಳಿ ಹಬ್ಬದ ಅವಧಿಯಲ್ಲಿ ಸಮುದ್ರದಲ್ಲಿನ ವಾತಾವರಣ ಬದಲಾವಣೆ ಆಗುತ್ತದೆ. ಸಮುದ್ರ ಉಷ್ಣತೆಯಿಂದ ತಂಪು ವಾತಾವರಣಕ್ಕೆ ತಿರುಗುವ ಅವಧಿಯಲ್ಲಿ ಅಲ್ಲಿನ ಮೀನುಗಳು ಕಡಲತೀರಕ್ಕೆ ಅಪ್ಪಳಿಸುತ್ತವೆ. ಲಕ್ಷಾಂತರ ಸಂಖ್ಯೆಯಲ್ಲಿ ಒಟ್ಟಿಗೆ ವಾಸಿಸುವ ತರ‍್ಲೆ ಮೀನು ತೀರ ಪ್ರದೇಶದ ಮರಳಿಗೆ ಬರುತ್ತಿದ್ದು, ಅತ್ಯಂತ ಶುಚಿ-ರುಚಿಯಾದ ಈ ಮೀನು ಸವಿಯಲು ಜನ ಹಾತೊರೆಯುತ್ತಿದ್ದಾರೆ.
ಮೂರು ದಿನದ ಹಿಂದೆ ಅಂಕೋಲಾದ ಹಾರವಾಡದಲ್ಲಿ ಭೂತಾಯಿ ಮೀನಿನ ಸುಗ್ಗಿ ನಡೆದಿತ್ತು. ಮಂಗಳವಾರ ಬೆಳಗ್ಗೆ ಕಾರವಾರದ ಮಾಜಾಳಿಯಿಂದ ದೇವಭಾಗದವರೆಗೆ ಮೀನುಗಳು ದಡಕ್ಕೆ ಬಂದಿದ್ದವು. ಉಚಿತವಾಗಿ ಮೀನು ಸಿಗುವ ಸುದ್ದಿ ಕೇಳಿ ನೂರಾರು ಜನ ಅಲ್ಲಿ ಹೋಗಿ ಮೀನು ಆರಿಸಿದರು. ಮನೆಯಿಂದ ತಂದ ಬುಟ್ಟಿಗಳಲ್ಲಿ ಮೀನು ತುಂಬಿಕೊAಡು ಹೋಗಿ ಬಗೆ ಬಗೆಯ ಖಾದ್ಯ ಮಾಡಿದರು.
`ಮಳೆಗಾಲದ ಅವಧಿಯಲ್ಲಿ ಸಮುದ್ರ ವಾತಾವರಣ ತಂಪಾಗಿದ್ದು, ಬೇಸಿಗೆ ಶುರುವಾಗುವಾಗ ಅಲ್ಲಿ ಕಾವು ಶುರುವಾಗುತ್ತದೆ. ಈ ಅವಧಿಯಲ್ಲಿ ದಿಡೀರ್ ಹವಾಮಾನ ಬದಲಾವಣೆ ಆಗುವುದರಿಂದ ಮೀನುಗಳು ದಡಕ್ಕೆ ಬರುವುದು ಸಾಮಾನ್ಯ’ ಎಂದು ಪ್ರಮೋದ ಹರಿಕಂತ್ರ ವಿವರಿಸಿದರು. `ಮಂಗಳವಾರ ಮಾಜಾಳಿಯಿಂದ ದೇವಭಾಗದವರೆಗೆ 2ಕಿಮೀ ಪ್ರದೇಶದಲ್ಲಿ ಮೀನು ಸಿಕ್ಕಿದೆ. ಅತ್ಯಂತ ಆರೋಗ್ಯಕರವಾಗಿರುವ ಭೂತಾಯಿ ಮೀನು ಸೇವನೆಯಿಂದ ಮನುಷ್ಯರ ಆರೋಗ್ಯ ವೃದ್ಧಿಯೂ ಸಾಧ್ಯ’ ಎಂದವರು ವಿವರಿಸಿದರು.
ದಡದ ಮೇಲೆ ರಾಶಿ-ರಾಶಿ ಮೀನು ಕಂಡು ಸ್ಥಳೀಯರಲ್ಲಿ ಸಂಭ್ರಮ ಕಾಣಿಸಿತು. ಸಮುದ್ರದ ಅಲೆಗಳ ಹೊಡೆತಕ್ಕೆ ದಡಕ್ಕೆ ಬಂದ ಮೀನು ಆರಿಸಲು ಪೈಪೋಟಿ ಕಾಣಿಸಿತು. ಬೆಳಗ್ಗೆ 8 ಗಂಟೆಯಿoದ 10 ಗಂಟೆ ಅವಧಿಯಲ್ಲಿ ಮೀನು ದಡಕ್ಕೆ ಬಂದಿದ್ದು, 30 ನಿಮಿಷದ ಅವಧಿಯಲ್ಲಿ ಬಹುತೇಕ ಮೀನು ಕಾರವಾರಿಗರ ಮನೆ ಸೇರಿತ್ತು.
ಕಡಲತೀರಕ್ಕೆ ಬಂದ ಮೀನು-ಜನ ಮುಗಿಬಿದ್ದು ಆರಿಸಿದ ವಿಡಿಯೋ ಇಲ್ಲಿ ನೋಡಿ..