ಗೋಕರ್ಣಕ್ಕೆ ಬರುವ ಪ್ರವಾಸಿಗರಿಗೆ ರೂಮು ಕೊಡಿಸುವುವ ವಿಷಯದಲ್ಲಿ ಆ ಭಾಗದ ಲಾಡ್ಜು ಹಾಗೂ ಹೋಂ ಸ್ಟೇ ಕೆಲಸಗಾರರು ಹೊಡೆದಾಟ ಮಾಡಿಕೊಂಡಿದ್ದಾರೆ. ಪೊಲೀಸರು ಅವರೆಲ್ಲರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಕಿರಣಕುಮಾರ್ ಅವರು ಅಕ್ಟೊಬರ್ 1ರಂದು ಓಂ ಬೀಚ್ ಕಡೆ ಹೋಗುತ್ತಿದ್ದರು. ಮೇಲಿನಕೇರಿ ರಸ್ತೆಯಲ್ಲಿ ಗಲಾಟೆ ನಡೆಯುತ್ತಿರುವುದು ಅವರಿಗೆ ಗೊತ್ತಾಯಿತು. ಹತ್ತಿರ ಹೋಗಿ ನೋಡಿದಾಗ ಅಲ್ಲಿ 9 ಜನ ಹೊಡೆದಾಡುತ್ತಿದ್ದರು. ಸಾರ್ವಜನಿಕರು ಹಾಗೂ ಪ್ರವಾಸಿಗರ ಮುಂದೆಯೇ ಅವರು ಕೆಟ್ಟದಾಗಿ ಬೈದುಕೊಳ್ಳುತ್ತಿದ್ದರು.
ವಿಸ್ಮಯ ಲಾಡ್ಜಿನಲ್ಲಿ ಕೆಲಸ ಮಾಡುವ ಹನೆಹಳ್ಳಿ ಚರ್ಚಿನ ಬಳಿಯ ಮಹೇಶ ಮೋಹನ ನಾಯ್ಕ, ಸುಖಸಾಗರ ಲಾಡ್ಜಿನಲ್ಲಿ ಕೆಲಸ ಮಾಡುವ ಗಂಗೆಕೊಳ್ಳದ ಸತ್ಯನಾರಾಯಣ ಅರ್ಜುನ ಮೋರ್ಚೆ, ಸುಖಸಾಗರ ಲಾಡ್ಜಿನಲ್ಲಿ ಕೆಲಸ ಮಾಡುವ ಗೋಕರ್ಣ ಮೇಲಿನಕೇರಿಯ ಸಾಗರ ರಾಮಚಂದ್ರ ನಾಯ್ಕ ದೊಡ್ಡ ಗಲಾಟೆ ಮಾಡುತ್ತಿದ್ದರು. ಗೀಮ್ ಹೋಂ ಸ್ಟೇಯಲ್ಲಿ ಕೆಲಸ ಮಾಡುವ ಅಂಕೋಲಾ ಬೆಳಲೆಯ ವಿಜಯ ರಾಮಚಂದ್ರ ಹರಿಕಂತ್ರ, ಸಾಯಿಮಾತಾ ಲಾಡ್ಜಿನಲ್ಲಿ ಕೆಲಸ ಮಾಡುವ ಕುಮಟಾ ವಾಲಗಳ್ಳಿಯ ವಿರಾಜ ದೇವರಾಜ ನಾಯ್ಕ, ಕೃಷ್ಣ ಆಯುಷ್ ಹೋಂ ಸ್ಟೇಯಲ್ಲಿ ಕೆಲಸ ಮಾಡುವ ಕುಮಟಾ ಚಿನ್ನದಕೇರಿಯ ಪ್ರದೀಪ ನಾರಾಯಣ ಶೆಟ್ಟಿ ಸಹ ಕೈ ಕೈ ಮಿಲಾಯಿಸುತ್ತಿದ್ದರು.
ನಿಶಾ ಹೋಂ ಸ್ಟೇಯಲ್ಲಿ ಕೆಲಸ ಮಾಡುವ ಗೋಕರ್ಣ ಮೇಲಿನಕೇರಿಯ ಸುರೇಶ ನಾಗೇಶ ಗೌಡ, ಸುಖಸಾಗರದಲ್ಲಿ ಕೆಲಸ ಮಾಡುವ ಮೇಲಿನಕೇರಿಯ ರಾಜು ಶಿವಾ ಹುಲಸ್ವಾರ ಹಾಗೂ ಶಾರದಾ ಲಾಡ್ಜಿನಲ್ಲಿ ಕೆಲಸ ಮಾಡುವ ಕುಮಟಾ ಚಿನ್ನದಕೇರಿಯ ಬಸವರಾಜ ಬಸಪ್ಪ ಶಿರೂರು ಸಹ ಅಲ್ಲಿ ಗೊಂದಲ ಎಬ್ಬಿಸಿದ್ದರು. ಗೋಕರ್ಣಕ್ಕೆ ಬರುವ ಪ್ರವಾಸಿಗರನ್ನು ತಮ್ಮ ಲಾಡ್ಜಿಗೆ ಕರೆದೊಯ್ಯುವ ವಿಷಯವಾಗಿ ಅವರೆಲ್ಲರ ನಡುವೆ ಅನಾರೋಗ್ಯಕರ ಸ್ಪರ್ಧೆ ನಡೆದಿತ್ತು. ಪರಿಣಾಮ ಅವರವರಲ್ಲಿಯೇ ಈ ಹೊಡೆದಾಟ ಶುರುವಾಗಿತ್ತು.
ಪೊಲೀಸ್ ಸಿಬ್ಬಂದಿ ಕಿರಣಕುಮಾರ್ ಅವರು ಹೊಡೆದಾಟ ತಪ್ಪಿಸುವ ಪ್ರಯತ್ನ ಮಾಡಿದರು. ಆದರೆ, ಅವರು ಪೊಲೀಸರ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ಪೊಲೀಸರ ಮುಂದೆಯೇ ಹೊಡೆದಾಟ ನಡೆಸಿ ಶಾಂತಿ ಭಂಗ ನಡೆಸಿದ ಕಾರಣ ಕಿರಣಕುಮಾರ ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು. ಅಲ್ಲಿಂದ ಸೂಚನೆ ಬಂದಿದ್ದರಿAದ ಹೊಡೆದಾಡಿದವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದರು.