50 ವರ್ಷಗಳಿಂದ ಯಾವುದೇ ದಾಖಲೆ ಇಲ್ಲದೇ ಬದುಕುತ್ತಿದ್ದ ನೀಲಾ ಸಿದ್ದಿ ಅವರಿಗೆ ಇದೀಗ ಮತದಾನದ ಹಕ್ಕು ಸಿಕ್ಕಿದೆ. WHR ಆರ್ ಕೆ ಪೌಂಡೇಶನ್’ನ ವಿಶ್ವ ಮಾನವ ಹಕ್ಕು ಸಂಘಟನೆಯವರು ನೀಲಾ ಸಿದ್ದಿ ಅವರಿಗೆ ಈ ದಾಖಲೆ ಮಾಡಿಸಿಕೊಟ್ಟಿದ್ದಾರೆ.
ಯಲ್ಲಾಪುರದ ಉಮ್ಮಚ್ಗಿ ಸುತ್ತಮುತ್ತಲ ಪ್ರದೇಶದಲ್ಲಿ ನೀಲಾ ನಾಗ್ಯಾ ಸಿದ್ದಿ ಅವರು ಅಲೆದಾಡುತ್ತಿದ್ದರು. ಒಂಟಿಯಾಗಿ ಬದುಕುತ್ತಿದ್ದ ಅವರ ಬಳಿ ಈವರೆಗೂ ಯಾವುದೇ ದಾಖಲೆಗಳಿರಲಿಲ್ಲ. ಅಲ್ಪ ಪ್ರಮಾಣದ ಬುದ್ದಿಮಾಂದ್ಯರಾಗಿರುವ ಅವರು ಅಲ್ಲಿ-ಇಲ್ಲಿ ಕೂಲಿ ಮಾಡಿ ಬದುಕುತ್ತಿದ್ದರು. ನೀಲಾ ಸಿದ್ದಿ ಅವರಿಗೆ ಸ್ವಂತ ಸೂರು ಸಹ ಇರಲಿಲ್ಲ. ಮೂರು ತಿಂಗಳ ಹಿಂದೆ ಡ್ಬುಎಚ್‌ಆರ್ ಆರ್ ಕೆ ಪೌಂಡೇಶನ್’ನ ವಿಶ್ವ ಮಾನವ ಹಕ್ಕು ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯೆ ಗೀತಾ ಪುಟ್ಟ ಸಿದ್ದಿ ಅವರಿಗೆ ಈ ವಿಷಯ ಗೊತ್ತಾಯಿತು.
ಗೀತಾ ಸಿದ್ದಿ ಅವರು ನೀಲಾ ಸಿದ್ದಿ ಅವರಿಗೆ ಯಲ್ಲಾಪುರದ ಉಮ್ಮಚ್ಗಿ ಬಳಿಯ ನಂದಿಭಾವಿಯಲ್ಲಿ ಚಿಕ್ಕ ಜೋಪಡಿ ನಿರ್ಮಿಸಿಕೊಟ್ಟರು. ತಮ್ಮ ಮನೆ ಸಮೀಪವೇ ಆ ಜೋಪಡಿಯಿದ್ದು, ನಿತ್ಯ ಊಟ-ತಿಂಡಿಯನ್ನು ಸಹ ಬಿಡಿಸಿದರು. ಮೂರು ತಿಂಗಳ ಅಲೆದಾಟ ನಡೆಸಿ ನೀಲಾ ಸಿದ್ದಿ ಅವರಿಗೆ ಚುನಾವಣಾ ಆಯೋಗದ ಗುರುತಿನ ಪತ್ರ ಮಾಡಿಸಿಕೊಟ್ಟರು. ಸದ್ಯ ನೀಲಾ ಸಿದ್ದಿ ಅವರಿಗೆ ಆಧಾರ್ ಕಾರ್ಡ, ರೇಶನ್ ಕಾರ್ಡಗಾಗಿ ಗೀತಾ ಸಿದ್ದಿ ಅವರು ಓಡಾಡುತ್ತಿದ್ದಾರೆ. ನೀಲಾ ಸಿದ್ದಿ ಅವರು ಅನಾರೋಗ್ಯಕ್ಕೆ ಒಳಗಾದಾಗ ಅವರ ಆಸ್ಪತ್ರೆ ತಿರುಗಾಟದ ಹೊಣೆಯನ್ನು ಗೀತಾ ಸಿದ್ದಿ ಅವರು ವಹಿಸಿಕೊಂಡಿದ್ದಾರೆ.
`ನೀಲಾ ಸಿದ್ದಿ ಅವರ ಬಳಿ ಯಾವುದೇ ದಾಖಲೆಗಳಿಲ್ಲದ ಕಾರಣ ಯಾವ ಸರ್ಕಾರಿ ಸೌಲಭ್ಯವೂ ಸಿಗುತ್ತಿರಲಿಲ್ಲ. ಸದ್ಯ ಅವರಿಗೆ ಮತದಾನ ಹಕ್ಕು ಬಂದಿದ್ದು, ಉಳಿದ ಸೌಕರ್ಯ ಒದಗಿಸಲು ಶ್ರಮಿಸಲಾಗುತ್ತಿದೆ’ ಎಂದು ಗೀತಾ ಸಿದ್ದಿ ಅವರು ಹೇಳಿದ್ದಾರೆ. ಗುರುತು-ಪರಿಚಯ ಇಲ್ಲದ ಮಹಿಳೆಗೆ ನೆರವಾದ WHR ಆರ್ ಕೆ ಪೌಂಡೇಶನ್ ವಿಶ್ವ ಮಾನವ ಹಕ್ಕು ಸಂಘಟನೆಯ ಕೆಲಸ ಜನ ಮೆಚ್ಚುಗೆಗೆ ಪಾತ್ರವಾಗಿದೆ.