ಸರ್ಕಾರ ಬಡವರಿಗೆ ವಿತರಿಸುವ ಅಕ್ಕಿಯನ್ನು ಕದ್ದು ಸಾಗಿಸುತ್ತಿದ್ದ ಏಳು ಜನ ಭಟ್ಕಳ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಪಡಿತರ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಿಸುತ್ತಿರುವವರ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಆಹಾರ ನಿರೀಕ್ಷಕ ಉದಯ ತಳವಾರ ಅವರು ಕಳ್ಳರನ್ನು ಹುಡುಕಿಕೊಟ್ಟಿದ್ದಾರೆ.
ಭಟ್ಕಳ ಗಣೇಶ ನಗರದ ಸಮೀರ ಮುಗಳಿಹೊಂಡ, ಮಾಗಡಿ ರಾಮನಗರದ ಮಲ್ಲಿಕಾರ್ಜುನ ಆರ್, ತುಮಕೂರಿನ ನಿತೀನ ಹೆಚ್ ಎನ್ ಹಾಗೂ ಭಟ್ಕಳ ಗಣೇಶ ನಗರದ ಸಬೂಲ್ ಮುಗಳಿಹೊಂಡ ಅಕ್ರಮ ಅಕ್ಕಿ ಸಾಗಾಟದ ವೇಳೆ ಸಿಕ್ಕಿಬಿದ್ದಿದ್ದಾರೆ. ಈ ದಾಳಿಯಲ್ಲಿ 228 ಚೀಲಗಳಲ್ಲಿ ಒಟ್ಟು 11,400 ಕ್ವಿಂಟಲ್ ಅಕ್ಕಿ ಅಕ್ರಮ ಸಾಗಾಟವಾಗುತ್ತಿರುವುದನ್ನು ತಡೆಯಲಾಗಿದೆ. ಈ ಅಕ್ಕಿಯ ಮೌಲ್ಯ ಸುಮಾರು 3,87,600 ರೂಪಾಯಿಗಳಾಗಿದೆ.
ಅಕ್ರಮವಾಗಿ ಅಕ್ಕಿ ಸಾಗಾಟಕ್ಕೆ ಬಳಸಿದ್ದ ಅಶೋಕ ಲೈಲೆಂಡ್ ಲಾರಿ, ಮಾರುತಿ ಓಮ್ಮಿ ಮತ್ತು ಅಶೋಕ ಲೈಲೆಂಡ್ ದೋಸ್ತ್ ವಾಹನಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಈ ಕುರಿತು ಆಹಾರ ನಿರೀಕ್ಷಕ ಉದಯ ತಳವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.







