ಕುಮಟಾ ಪುರಸಭೆಯ ಕಂದಾಯ ನಿರೀಕ್ಷಕ ವೆಂಕಟೇಶ ಆರ್ ಅವರ ಮೇಲೆ ಒತ್ತಡ ತಂದ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರ ವಿರುದ್ಧ ಕಠಿಣ ಕ್ರಮಕ್ಕಾಗಿ ಕರ್ನಾಟಕ ರಣಧೀರ ವೇದಿಕೆ ಪಟ್ಟು ಹಿಡಿದಿದೆ. ಈ ಬಗ್ಗೆ ಜಿಲ್ಲೆಯ ಹಲವು ಕಡೆ ವೇದಿಕೆ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ರಣಧೀರ ವೇದಿಕೆಯ ಜಿಲ್ಲಾ ಘಟಕದಿಂದ ಸಂಘಟನೆ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಅವರು ಅಂಕೋಲಾ ತಹಶೀಲ್ದಾರ್ ಕಚೇರಿ ಮೂಲಕ ಸರ್ಕಾರಕ್ಕೆ ಪತ್ರ ರವಾನಿಸಿದರು. `ಅನುಕಂಪದ ಆಧಾರದ ಮೇಲೆ ಸರ್ಕಾರಿ ಸೇವೆಗೆ ಸೇರಿದ್ದ ವೆಂಕಟೇಶ ಆರ್ ಅವರು ತಮ್ಮ ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತಿದ್ದಾರೆ. ಜಾತಿ ನಿಂದನೆ, ಅಶ್ಲೀಲ ಪದ ಬಳಕೆಯಿಂದ ಅವರ ಬೇಸತ್ತಿರುವ ಬಗ್ಗೆ ಪತ್ರ ಬರೆದ್ದಾರೆ. ಕಿರಿಯ ಅಧಿಕಾರಿಗಳ ಮೇಲೆ ಮೇಲಧಿಕಾರಿಗಳ ಒತ್ತಡ ತಪ್ಪಿಸಬೇಕು’ ಎಂದು ಅವರು ಆಗ್ರಹಿಸಿದರು.
`ಅಧೀನ ಅಧಿಕಾರಿ ತಪ್ಪು ಮಾಡಿದರೆ ಕಾನೂನಿನ ಪ್ರಕಾರ ನೋಟಿಸ್ ನೀಡಬೇಕು. ಅದಾದ ನಂತರ ಶಿಸ್ತು ಕ್ರಮ ಜರುಗಿಸಬೇಕು. ಆದರೆ, ಕೆಟ್ಟದಾಗಿ ನಿಂದಿಸುವುದು ಸರಿಯಲ್ಲ’ ಎಂದು ಪ್ರಮುಖರಾದ ಚೇತನ್ ನಾಯ್ಕ, ಕಿರಣ್ ಗಾಂವಕರ್, ಐಶ್ವರ್ಯ ನಾಯ್ಕ್, ವಿವೇಕ್ ಐಗಳ, ಮಹೇಶ್ ಗೌಡ, ಸುಭಾಷ ನಾಯ್ಕ, ರಘುನಾಥ ನಾಯ್ಕ, ಚರಣ ನಾಯ್ಕ ಹೇಳಿದರು. `ಅಂಕೋಲಾ ಪುರಸಭೆಯಲ್ಲಿ ಅಧಿಕಾರದಲ್ಲಿರುವಾಗ ಸಹ ಎಂ ಆರ್ ಸ್ವಾಮಿ ಅವರು ಅಧೀನ ಅಧಿಕಾರಿಗಳಿಗೆ ಪೀಡಿಸುತ್ತಿದ್ದರು’ ಎಂದು ಸಂಘಟನೆಯವರು ಸ್ಮರಿಸಿದರು.
`ಎಂ ಆರ್ ಸ್ವಾಮಿ ಅವರನ್ನು ತಕ್ಷಣ ಅಮಾನತುಗೊಳಿಸಬೇಕು. ಸಿಸಿ ಕ್ಯಾಮರಾ ದಾಖಲೆ ಪರಿಶೀಲಿಸಿ ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು. ವೇದಿಕೆಯ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಸುಪ್ರಿಯಾ ನಾಯ್ಕ್ ಪತ್ರವನ್ನು ಓದಿದ್ದು, ಅದನ್ನು ಜಿಲ್ಲಾಡಳಿತಕ್ಕೆ ರವಾನಿಸಲಾಯಿತು. ಭಟ್ಕಳ, ಕುಮಟಾದಲ್ಲಿಯೂ ಸಂಘಟನೆಯವರು ಮನವಿ ಸಲ್ಲಿಸಿದರು. ಕುಮಟಾದಲ್ಲಿ ಸಂಘಟನೆ ತಾಲೂಕು ಘಟಕದ ಅಧ್ಯಕ್ಷ ಸಮೀರ್ ಎಮ್ ಮಿರ್ಜಾನಕರ್ ಹಾಗೂ ಸದಸ್ಯರುಗಳಾದ ಮಂಜುನಾಥ್ ಹಳ್ಳೆರ, ವೆಂಕಟೇಶ್ ನಾಯ್ಕ, ಹಾಗೂ ಇರ್ಫಾನ್ ಕಾಜಿ ಮನವಿ ಸಲ್ಲಿಸಿದರು. ಭಟ್ಕಳದಲ್ಲಿ ಭಟ್ಕಳ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಶನಿಯಾರ ನಾಯ್ಕ ಹಾಗೂ ಪದಾಧಿಕಾರಿಗಳಾದ ರಾಜೇಶ್ ಆಚಾರಿ, ರತ್ನಾಕರ್ ನಾಯ್ಕ್ ಜೊತೆ ಸದಸ್ಯರು ಮನವಿ ಸಲ್ಲಿಸಿದರು.