ಶಿರಸಿಯ ವಿನಾಯಕ ಹೆಗಡೆ ಅವರು ತಮ್ಮ ಮನೆ ಬಳಿ ನಡೆಸುತ್ತಿದ್ದ ಜೂಜಾಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ. ಹಣದ ಜೊತೆ ಇಸ್ಪಿಟ್ ಎಲೆ ಹರಡಿಕೊಂಡಿದ್ದ ಹೆಗಡೆರ ಮನೆಯ ಕಂಬಳಿಯನ್ನು ಸಹ ಬಿಡದೇ ಪೊಲೀಸರು ಜಪ್ತು ಮಾಡಿದ್ದಾರೆ.
ಅಕ್ಟೊಬರ್ 4ರಂದು ಶಿರಸಿ ಜಾನ್ಮನೆ ಬಳಿಯ ಕೂರ್ಸೆಮನೆಯ ವಿನಾಯಕ ಹೆಗಡೆ ಅವರು ತಮ್ಮ ಬಳಗದವರನ್ನು ಜೂಜಾಡಲು ಆಮಂತ್ರಿಸಿದ್ದರು. ಆ ದಿನ ರಾತ್ರಿ 9.45 ಆದರೂ ವಿನಾಯಕ ಹೆಗಡೆ ಅವರ ಮನೆಗೆ ಹೋಗುವ ರಸ್ತೆ ಬದಿ ದೀಪ ಬೆಳಗುತ್ತಿತ್ತು. ಆ ದೀಪದ ಬೆಳಕಿನಲ್ಲಿ ಬಲವಳ್ಳಿ ನೆಬ್ಬೂರಿನ ಹರೀಶ ಭಟ್ಟ, ಜಾನ್ಮನೆ ನೆಬ್ಬೂರಿನ ವಿಶ್ವನಾಥ ಭಟ್ಟ, ನವಿಲಗಾರ ಹತ್ತರಗಿಯ ಗಜಾನನ ಹೆಗಡೆ ಹಾಗೂ ರೇವಣಕಟ್ಟಾದ ರಾಮಚಂದ್ರ ಭಟ್ಟ ಕವಳ ತೂಪಿ, ಹರಟೆ ಹೊಡೆಯುತ್ತಿದ್ದರು. ಜೊತೆಗೆ ಅಲ್ಲಿ ಹಾಸಿದ್ದ ಕಂಬಳಿ ಮೇಲೆ ಕುಳಿತು ಅವರೆಲ್ಲರೂ ಅಂದರ್ ಬಾಹರ್ ಆಟದಲ್ಲಿ ತೊಡಗಿದ್ದರು.
ಸಾರ್ವಜನಿಕ ಸ್ಥಳದಲ್ಲಿ ರಾತ್ರಿಯಿಡೀ ಕಾನೂನುಬಾಹಿರ ಆಟ ನಡೆಯುವ ಬಗ್ಗೆ ಅರಿತ ಅಲ್ಲಿನವರೊಬ್ಬರು ಈ ಬಗ್ಗೆ ಪೊಲೀಸರಿಗೆ ಫೋನ್ ಮಾಡಿದರು. ತಮ್ಮ ವ್ಯಾಪ್ತಿಯಲ್ಲಿ ಅಕ್ರಮ ಆಟ ನಡೆಯುವುದನ್ನು ಸಹಿಸದ ಶಿರಸಿ ಗ್ರಾಮೀಣ ಠಾಣೆ ಪಿಎಸ್‌ಐ ಅಶೋಕ್ ರಾಥೋಡ್ ಅವರು ತನಿಖೆಗಾಗಿ ಅಲ್ಲಿಗೆ ಹೋದರು. ಕೂರ್ಸೆಮನೆ ರಸ್ತೆ ಬದಿ ಅಂದರ್ ಬಾಹರ್ ಆಡುತ್ತಿರುವುದನ್ನು ನೋಡಿ ಪೊಲೀಸ್ ತಂಡದ ಜೊತೆ ಅವರು ದಾಳಿ ಮಾಡಿದರು.
ಆಗ, ಕಂಬಳಿ ಮೇಲೆ ಇಸ್ಪಿಟ್ ಎಲೆಗಳು ಹರಡಿ ಬಿದ್ದವು. ಜೊತೆಗೆ 13730ರೂ ಹಣವೂ ಅಲ್ಲಿ ಕಾಣಿಸಿತು. ಚಾರ್ಜಿಂಗ್ ಬ್ಯಾಟರಿ ಬೆಳಕಿನಲ್ಲಿ ಇಸ್ಪಿಟ್ ಆಡುತ್ತಿದ್ದ ಐದು ಜನರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಇಸ್ಪಿಟ್ ಎಲೆ, ಕಂಬಳಿ, ಬ್ಯಾಟರಿಯನ್ನು ವಶಕ್ಕೆಪಡೆದು ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಿದರು.