ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ದಾಂಡೇಲಿಯ ಅಂಬೇವಾಡಿಯಲ್ಲಿ ಎಂಟು ವರ್ಷಗಳಿಂದ ಮನೆ ನಿರ್ಮಾಣ ಕೆಲಸ ನಡೆಯುತ್ತಿದ್ದು, ಈವರೆಗೂ ಆ ಮನೆಗಳು ಫಲಾನುಭವಿಗಳಿಗೆ ಸಿಕ್ಕಿಲ್ಲ. ಹೀಗಾಗಿ ಅಲ್ಲಿನ ಅಕ್ರಮದ ವಿರುದ್ಧ ಅಕ್ರಂ ಖಾನ್ ಪ್ರತಿಭಟನೆ ಶುರು ಮಾಡಿದ್ದಾರೆ.
ರಾಜ್ಯ ಗೃಹ ಮಂಡಳಿಯಿAದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಮನೆ ನಿರ್ಮಾಣ ಕಾರ್ಯ ನಡೆದಿದೆ. ಬೆಂಗಳೂರಿನ ಕಂಪನಿ ಇದರ ಗುತ್ತಿಗೆಪಡೆದಿದೆ. ಸಾವಿರ ಮನೆಗಳ ಪೈಕಿ 100 ಮನೆಗಳನ್ನು ಮಾತ್ರ ವಿತರಿಸಲಾಗಿದ್ದು, ಉಳಿದ ಮನೆ ಬಗ್ಗೆ ಪ್ರಶ್ನಿಸಿದವರಿಗೆ ಉತ್ತರ ಸಿಗುತ್ತಿಲ್ಲ. ಎಲ್ಲರಿಗೂ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ದಾಂಡೇಲಿ ಸಮಗ್ರ ಅಭಿವ್ರದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ ಅವರು ನಗರಸಭೆ ಕಚೇರಿ ಎದುರು ಧರಣಿ ಶುರು ಮಾಡಿದ್ದಾರೆ.
`ಮಂಡಳಿಯೂ 1106 ಫಲಾನುಭವಿಗಳಿಗೆ ಮನೆ ವಿತರಿಸುವುದಾಗಿ ತಿಳಿಸಿ ಹಣಪಡೆದಿದೆ. ಪ್ರತಿಯೊಬ್ಬ ಫಲಾನುಭವಿ 50-70 ಸಾವಿರ ಹಣ ಪಾವತಿಸಿದ್ದಾರೆ. 12 ತಿಂಗಳ ನಂತರ ಮನೆ ಕೊಡುವ ಭರವಸೆ ಈಗಲೂ ಈಡೇರಿಲ್ಲ. 53 ಕೋಟಿ ರೂಪಾಯಿ ವೆಚ್ಚದ 1106 ಮನೆಗಳ ನಿರ್ಮಾಣ ಕಾಮಗಾರಿ ಮುಗಿಯುವ ಮುನ್ನ ಗುತ್ತಿಗೆ ಕಂಪನಿ 38 ಕೋಟಿ ರೂ ಹಣದ ಬಿಲ್ ಪಾವತಿಸಿಕೊಂಡಿದೆ’ ಎಂದು ಹಣಕಾಸು ಅಕ್ರಮದ ಮಾಹಿತಿಯನ್ನು ಹೋರಾಟಗಾರರು ಬಿಚ್ಚಿಟ್ಟರು.
`ಮನೆಯ ಕನಸು ಕಂಡ ಸಾವಿರಾರು ಜನರಿಗೆ ಅನ್ಯಾಯವಾಗಿದೆ. ಅಧಿಕಾರಿಗಳ ಜೊತೆ ಜನಪ್ರತಿನಿಧಿಗಳು ಈ ಸಮಸ್ಯೆ ಆಲಿಸಿ ಪರಿಹಾರ ಒದಗಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.