ಬೆಂಕಿಯ ಜ್ವಾಲೆಯಲ್ಲಿ ಬೆಂದ ಯಲ್ಲಾಪುರದ ಜನ್ನಿ ಅವರು ಏಳು ದಿನ ನರಳಾಡಿ ಸಾವನಪ್ಪಿದ್ದಾರೆ. ಪತ್ನಿ ಶೀಲ ಶಂಕಿಸಿ ಬಾಬು ಅವರೇ ಪತ್ನಿಗೆ ಬೆಂಕಿ ಹಚ್ಚಿ ಕೊಂದಿದ್ದಾರೆ!
ಯಲ್ಲಾಪುರದ ಕಿರವತ್ತಿ ಬೊಂಬಡಿಕೊಪ್ಪದ ಜನ್ನಿ ಬಾಬು ಖಾತ್ರೋಟ ಅವರು ವಾಸವಾಗಿದ್ದರು. ಅದೇ ಊರಿನ ಬಾಬು ಎಕ್ಕು ಖಾತ್ರೋಡ ಅವರನ್ನು ಜನ್ನಿ ಅವರು ವರಿಸಿದ್ದರು. ಈ ದಂಪತಿ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಆದರೆ, ಬಾಬು ಅವರಿಗೆ ಪತ್ನಿ ಮೇಲೆ ನಂಬಿಕೆಯಿರಲಿಲ್ಲ. ಹೀಗಾಗಿ ಮದುವೆ ಆದ ದಿನದಿಂದಲೂ ಬಾಬು ಅವರು ಜನ್ನಿ ಅವರನ್ನು ಪೀಡಿಸುತ್ತಿದ್ದರು. ಪತ್ನಿ ಶೀಲದ ಬಗ್ಗೆ ಅವರು ಪದೇ ಪದೇ ಅನುಮಾನವ್ಯಕ್ತಪಡಿಸಿ ಕಾಡಿಸುತ್ತಿದ್ದರು.
ಅಕ್ಟೊಬರ್ 3ರಂದು ಬಾಬು ಖಾತ್ರೋಟ ಅವರು ಪತ್ನಿ ಬಳಿ ಜಗಳವಾಡಿದರು. ಆ ವೇಳೆ ಮತ್ತೆ ಪತ್ನಿಯ ಶೀಲದ ಬಗ್ಗೆ ಮಾತನಾಡಿದರು. ಕೆಟ್ಟದಾಗಿ ಬೈದು ನಿಂದಿಸಿದರು. `ನೀ ಮೊದಲಿನಿಂದ ಬೇರೆಯವರ ಜೊತೆಯಿದ್ದ ವಿಷಯ ಗೊತ್ತಿದೆ’ ಎಂದು ಕೂಗಾಡಿದರು. `ನನ್ನನ್ನು ಏಕೆ ಬೈಯುವೆ?’ ಎಂದು ಜನ್ನಿ ಖಾತ್ರೋಟ ಮರುಪ್ರಶ್ನೆ ಹಾಕಿದರು. ಇದರಿಂದ ಏಕಾಏಕಿ ಸಿಟ್ಟಾದ ಬಾಬು ಖಾತ್ರೋಟ ಅವರು ಬೈಕಿಗೆ ಹಾಕಲು ತಂದಿದ್ದ ಪೆಟ್ರೋಲ್ ಕ್ಯಾನ್ ಬಳಿ ತೆರಳಿದರು. ಜನ್ನಿ ಅವರ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು.
ಮೈಗೆ ಬೆಂಕಿ ಅಂಟಿಸಿಕೊAಡ ಜನ್ನಿ ಅವರು ದೊಡ್ಡದಾಗಿ ಬೊಬ್ಬೆ ಹೊಡೆಯುತ್ತ ತಮ್ಮ ತವರು ಮನೆ ಕಡೆ ಓಡಿದರು. ತವರು ಮನೆಯವರು ಬೆಂಕಿಯನ್ನು ಆರಿಸಿ ಜನ್ನಿಯವರನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಅದಾದ ನಂತರ ಜನ್ನಿ ಖಾತ್ರೋಟ ಅವರ ಸಹೋದರ ಗಂಗಾರಾಮ ಬಾಬು ಎಡಗೆ ಅವರು ಪೊಲೀಸರಿಗೆ ಫೋನ್ ಮಾಡಿದರು. ಪೊಲೀಸರು ಬಂದು ಜನ್ನಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜನ್ನಿ ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಲಾಯಿತು. ತನಗಾದ ಅನ್ಯಾಯದ ಬಗ್ಗೆ ಜನ್ನಿ ಅವರು ಆಸ್ಪತ್ರೆಯಲ್ಲಿರುವಾಗಲೇ ಪೊಲೀಸ್ ಹೇಳಿಕೆ ನೀಡಿದ್ದರು.
ಎರಡು ದಿನಗಳ ಕಾಲ ಚಿಕಿತ್ಸೆಪಡೆದ ಜನ್ನಿ ಅವರು ಅಕ್ಟೊಬರ್ 5ರಂದು ತವರು ಮನೆಗೆ ಮರಳಿದರು. ಮತ್ತೆ ಐದು ದಿನಗಳ ಕಾಲ ಇಲ್ಲಿಯೇ ಆರೈಕೆಗೆ ಒಳಗಾದರು. ಆದರೆ, ಮೈ ಸುಟ್ಟ ಕಾರಣ ಅವರು ನಿತ್ಯವೂ ನರಳುತ್ತಿದ್ದು, ಅಕ್ಟೊಬರ್ 10ರಂದು ಪ್ರಾಣಬಿಟ್ಟರು. ಅಕ್ಕನ ಸಾವಿಗೆ ಕಾರಣನಾದ ಬಾಬು ಎಕ್ರು ಖಾತ್ರೋಟ ವಿರುದ್ಧ ಅವರ ಭಾವ ಗಂಗಾರಾಮ ಬಾಬು ಎಡಗೆ ಪೊಲೀಸರಿಗೆ ಮಾಹಿತಿ ನೀಡಿದರು.
ಗಂಗಾರಾಮ ಬಾಬು ಎಡಗೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. ಪಿಎಸ್‌ಐ ರಾಜಶೇಖರ ವಂದಲಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.