ಮೂರು ತಿಂಗಳ ಹಿಂದೆ ಮಾವಿನ ತೋಟಕ್ಕೆ ಎಮ್ಮೆ ಮೇಯಿಸಲು ಬಿಟ್ಟವರ ವಿರುದ್ಧ ಯಲ್ಲಾಪುರದ ಗೋಯಾ ಬಾಬು ಅಡೋಳಕರ್ ಅವರು ಕಾನೂನು ಸಮರ ಸಾರಿದ್ದಾರೆ. ತಮ್ಮ ತೋಟಕ್ಕೆ ನುಗ್ಗಿ ಮಾವಿನ ಹಣ್ಣು ಕದ್ದವರ ವಿರುದ್ಧ ಅವರು ಪೊಲೀಸ್ ದೂರು ನೀಡಿದ್ದಾರೆ.
ಯಲ್ಲಾಪುರ ಹೊಸಳ್ಳಿಯ ದಾಂಡೇಲಿವಾಡದಲ್ಲಿ ಗೋಯಾ ಬಾಬು ಅಡೋಳಕರ್ ಅವರು ಅತಿಕ್ರಮಣ ಜಮೀನು ಮಾಡಿದ್ದಾರೆ. ಅವರ ತಂದೆಯವರ ಹೆಸರಿನಲ್ಲಿ ಜಮೀನಿನ ಜಿಪಿಎಸ್ ದಾಖಲೆಗಳಿವೆ. ಹೀಗಿರುವಾಗ ಬೈಲಂದೂರು ಗೌಳಿವಾಡದ ಬಕ್ಕು ದೋಂಡು ತೋರತ್, ಬಾಬು ದೋಂಡು ತೋರತ್, ಜಿಲ್ಲು ದೋಂಡು ತೋರತ್ ಹಾಗೂ ಜನ್ನು ಬಾಬು ತೋರತ್ ಅವರು ಪದೇ ಪದೇ ಆ ಜಮೀನಿನ ಒಳಗೆ ಪ್ರವೇಶಿಸುತ್ತಿದ್ದಾರೆ. ಇದನ್ನು ಗೋಯಾ ಬಾಬು ಅಡೋಳಕರ್ ಅವರು ಸಹಿಸುತ್ತಿಲ್ಲ.
ಎದುರುದಾರರು ತಾವು ಸಾಕಿದ ಎಮ್ಮೆಯನ್ನು ಸಹ ಗೋಯಾ ಬಾಬು ಅಡೋಳಕರ್ ಅವರ ಜಮೀನಿನ ಒಳಗೆ ಮೇವಿಗೆ ಬಿಡುತ್ತಾರೆ. ಇದೇ ವಿಷಯವಾಗಿ ಎರಡು ಕುಟುಂಬದ ನಡುವೆ ಜಗಳ ನಡೆಯುತ್ತಿದ್ದು, ಮೂರು ತಿಂಗಳ ಹಿಂದೆ ಗೋಯಾ ಬಾಬು ಅಡೋಳಕರ್ ಅವರ ಜಮೀನಿನಲ್ಲಿದ್ದ ಮಾವಿನ ಹಣ್ಣುಗಳು ಸಹ ಕಳ್ಳತನವಾಗಿವೆ. ಅಕ್ರಮವಾಗಿ ಜಮೀನಿಗೆ ಪ್ರವೇಶಿಸಿ ಮಾವಿನಹಣ್ಣು ಕೊಯ್ದಿರುವುದು ಹಾಗೂ ಎಮ್ಮೆಯನ್ನೂ ಜಮೀನಿಗೆ ಮೇಯಲು ಬಿಟ್ಟು ಬೆಳೆ ಹಾಳು ಮಾಡಿದ ವಿಚಾರ ಹೊಡೆದಾಟದ ಸ್ವರೂಪ ಪಡೆದಿದೆ.
ಸೆಪ್ಟೆಂಬರ್ 5ರಂದು ಗೋಯಾ ಬಾಬು ಅಡೋಳಕರ್ ಅವರ ಜಮೀನಿನಲ್ಲಿದ್ದ ಅವರ ತಾಯಿಯ ಮೇಲೆ ನಾಲ್ವರು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋದ ಗೋಯಾ ಬಾಬು ಅಡೋಳಕರ್ ಅವರು ಪೊಲೀಸರ ಮೇಲೆ ಒತ್ತಡ ತಂದು ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ. ಪೊಲೀಸರು ಸದ್ಯ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.