ಕಾರವಾರದ ಬಾಡ ಬಳಿಯ ಕಾಜುಭಾಗದಲ್ಲಿರುವ ಬಾಲಕಿಯರ ವಸತಿ ನಿಲಯ ಅವ್ಯವಸ್ಥೆಯ ಆಗರವಾಗಿದೆ. ಸಾಕಷ್ಟು ಬಾರಿ ತಿಳಿಸಿದರೂ ಅಲ್ಲಿನ ಸಮಸ್ಯೆಯನ್ನು ಅಧಿಕಾರಿಗಳು ಪರಿಗಣಿಸಿಲ್ಲ. ಹೀಗಾಗಿ ಅಲ್ಲಿನ ವಿದ್ಯಾರ್ಥಿನಿಯರು ಶುಕ್ರವಾರ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
ಹಾಸ್ಟೇಲ್ ವಾರ್ಡನ್ ಊಟಕ್ಕೆ ಕರೆದರೂ ಮಕ್ಕಳು ಹೋಗಿಲ್ಲ. ಆರೋಗ್ಯ ಸಮಸ್ಯೆ, ಅಶುಚಿತ್ವ, ಅಸಮರ್ಪಕ ಆಹಾರ ವಿತರಣೆಯ ಬಗ್ಗೆ ವಿದ್ಯಾರ್ಥಿನಿಯರು ಆಕ್ರೋಶವ್ಯಕ್ತಪಡಿಸಿದರು. `ಕೊಳೆತ ತರಕಾರಿ ಹಾಕಿ ಅಡುಗೆ ಮಾಡಲಾಗುತ್ತಿದೆ. ಸೊಳ್ಳೆಗಳ ಕಾಟಕ್ಕೆ ನಿಯಂತ್ರಣವಿಲ್ಲ. ಶೌಚಾಲಯ ಸ್ವಚ್ಚತೆ ಸರಿಯಾಗಿಲ್ಲ’ ಎಂದು ವಿದ್ಯಾರ್ಥಿನಿಯರು ದೂರಿದರು. ವಾರ್ಡನ್ ಮಂಜುಳ ಅವರ ಬಗ್ಗೆಯೂ ಸಾಕಷ್ಟು ಆರೋಪ ಮಾಡಿ, ಕಿಡಿಕಾರಿದರು.
ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ವಿಷಯ ಕೇಳಿ ರಾತ್ರಿಯೇ ಅಧಿಕಾರಿಗಳು ಹಾಸ್ಟೇಲಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. `ಮೊದಲು ಊಟ ಮಾಡಿ, ನಂತರ ಸಮಸ್ಯೆ ಆಲಿಸೋಣ’ ಎಂದು ಅಧಿಕಾರಿಗಳು ಹೇಳಿದರೂ ವಿದ್ಯಾರ್ಥಿನಿಯರು ಪಟ್ಟು ಬಿಡಲಿಲ್ಲ. ಅದಾದ ನಂತರ ಹಾಸ್ಟೆಲ್ ಒಳಗಿನ ಅವ್ಯವಸ್ಥೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡಿದರು.
ಕಾರವಾರದ ತಹಶೀಲ್ದಾರ್ ನಿಶ್ಚಲ್ ನೊರೊನ್ಹಾ ಹಾಗೂ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶಿವಕ್ಕ ಮಾದರ ಹಾಸ್ಟೇಲ್ ಒಳಗೆ ಗಮನಿಸಿ ವಾರ್ಡನ್ ಮಂಜುಳಾ ಅವರಿಗೆ ನೋಟಿಸ್ ಜಾರಿ ಮಾಡಿದರು. ಅದಾದ ನಂತರ ಉತ್ತಮ ಊಟ, ಸ್ವಚ್ಚತೆಗೆ ಆದ್ಯತೆ ಕೊಡುವ ಭರವಸೆ ನೀಡಿದರು. `ವಿದ್ಯಾರ್ಥಿನಿಯರ ಬಳಿಯೇ ಎಲ್ಲಾ ಕೆಲಸ ಮಾಡಿಸುತ್ತಾರೆ’ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.