ಕಾರವಾರದ ಸಿವಿಲ್ ಆಸ್ಪತ್ರೆಯ ಒಳಗೆ ನಾಯಿ ಓಡಾಡುತ್ತಿದೆ. ಆ ನಾಯಿ ಎಲ್ಲೆಂದರಲ್ಲಿ ಗಲೀಜು ಮಾಡುತ್ತಿದ್ದು, ಇಲ್ಲಿನ ಭದ್ರತಾ ಸಿಬ್ಬಂದಿಯನ್ನು ಸಹ ಬೆದರಿಸುತ್ತಿದೆ!
ಜಿಲ್ಲಾಕೇಂದ್ರ ಕಾರವಾರದಲ್ಲಿ ಬೀದಿ ನಾಯಿಗಳ ಕಾಟ ಜೋರಾಗಿದೆ. ಅಶಕ್ತರರ ಮೇಲೆ ನಾಯಿಗಳು ದಾಳಿ ನಡೆಸುತ್ತಿದ್ದು, ದಾಳಿಗೆ ಒಳಗಾದ ಜನ ಅನಗತ್ಯವಾಗಿ ಆಸ್ಪತ್ರೆ ಓಡಾಡುತ್ತಿದ್ದಾರೆ. ಸದ್ಯ ಆಸ್ಪತ್ರೆ ಒಳಗೂ ನಾಯಿಗಳ ಕಾಟ ಹೆಚ್ಚಿದೆ. ರಾತ್ರಿ ಅವಧಿಯಲ್ಲಿ ಹಲವು ನಾಯಿಗಳು ಆಸ್ಪತ್ರೆ ಪ್ರವೇಶಿಸುತ್ತಿದ್ದು ಅಲ್ಲಿನ ಕಟ್ಟಡಗಳಲ್ಲಿ ಆಶ್ರಯಪಡೆಯುತ್ತಿವೆ.
ಜಿಲ್ಲಾ ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯಕ್ಕಿರಬೇಕಾದ ಸಿಬ್ಬಂದಿ ನಿದ್ದೆ ಮಾಡುತ್ತಿದ್ದು, ಅದೇ ಸಮಯದಲ್ಲಿ ಆಸ್ಪತ್ರೆಯ ಒಳಗೆ ನಾಯಿ ನುಗ್ಗುತ್ತಿದೆ. ರೋಗಿಗಳು ಆಶ್ರಯಪಡೆದ ಕೋಣೆಗಳಿಗೂ ತೆರಳಿ ಗಲೀಜು ಮಾಡುತ್ತಿದೆ. ಆಸ್ಪತ್ರೆ ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಗಮನಹರಿಸದ ಬಗ್ಗೆ ಆಕ್ರೋಶವ್ಯಕ್ತವಾಗಿದೆ.
ಮೊನ್ನೆ ರಾತ್ರಿ 3 ಗಂಟೆ ಅವಧಿಗೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ದಿಡೀರ್ ಆಗಿ ಆಸ್ಪತ್ರೆಗೆ ಹೋಗಿದ್ದು, ಅಲ್ಲಿನ ಅವ್ಯವಸ್ಥೆಗಳ ವಿಡಿಯೋ ಮಾಡಿದ್ದಾರೆ.
ಆಸ್ಪತ್ರೆ ಆವರಣದೊಳಗೆ ನಾಯಿ ಬಂದಿರುವುದನ್ನು ಪ್ರಶ್ನಿಸಿದ ನಂತರ ಬೇರೆ ವಿಭಾಗದ ಭದ್ರತಾ ಸಿಬ್ಬಂದಿ ಆ ನಾಯಿ ಓಡಿಸುವ ಕೆಲಸ ಮಾಡಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಆ ವಿಡಿಯೋ ಕಳುಹಿಸಿ ಆಸ್ಪತ್ರೆಗೆ ತಾವು ಹಠಾತ್ ಭೇಟಿ ಮಾಡಿ ಎಂದು ಮನವಿ ಮಾಡಿದ್ದಾರೆ. `ಆಸ್ಪತ್ರೆಯ ಅವ್ಯವಸ್ಥೆಗಳನ್ನು ಸರಿಪಡಿಸಲು ಅಧಿಕಾರದಲ್ಲಿರುವವರು ಆಗಾಗ ಅಲ್ಲಿ ಭೇಟಿ ಕೊಡಬೇಕು. ಅಲ್ಲಿನ ಸಮಸ್ಯೆಗಳನ್ನು ಸರಿಪಡಿಸಬೇಕು’ ಎಂದು ಮಾಧವ ನಾಯಕ ಅವರು ಆಗ್ರಹಿಸಿದ್ದಾರೆ.