ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ತೀವೃ ಪ್ರಮಾಣದಲ್ಲಿ ಅಸಮಧಾನವ್ಯಕ್ತಪಡಿಸಿದ್ದಾರೆ. `ಕಾಶ್ಮೀರದ ಚಿನಾಬ್‌ನಂಥ ದುರ್ಗಮ ಪ್ರದೇಶದಲ್ಲಿ ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆಯನ್ನು ನಿಗಧಿತ ಅವಧಿಯೊಳಗೆ ಮುಕ್ತಾಯಗೊಳಿಸಲಾಗುತ್ತಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಕಾಲಮಿತಿ ಮೀರಿದರೂ ಮುಕ್ತಾಯವಾಗುತ್ತಿಲ್ಲ’ ಎಂದವರು ತಮ್ಮ ಬೇಸರವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು ಅಸ್ತವ್ಯಸ್ಥ ಹೆದ್ದಾರಿಗಳ ಬಗ್ಗೆ ಸಮಗ್ರ ವರದಿ ವಾಚಿಸಿದರು. `ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿವೆ. ರಸ್ತೆ ಹದಗೆಟ್ಟಿರುವ ಬಗ್ಗೆ ಜನ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಜನರ ಅಭಿಪ್ರಾಯ ಆಡಳಿತ ವರ್ಗಕ್ಕೆ ಕಪ್ಪು ಚುಕ್ಕೆಯಾಗಿದೆ’ ಎಂದು ಕಾಗೇರಿ ಹೇಳಿದ್ದಾರೆ. `ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜನರ ಜೀವದ ಜತೆ ಆಟವಾಡದೇ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು. ರಸ್ತೆಯ ತಿರುವುಗಳಲ್ಲಿ ಸೂಚನಾ ಫಲಕ ಹಾಗೂ ರಿಪ್ಲೆಕ್ಟರ್ ಅಳವಡಿಸುವ ಮೂಲಕ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು’ ಎಂದವರು ಸೂಚಿಸಿದ್ದಾರೆ.
`ಯಲ್ಲಾಪುರದ ಅರಬೈಲ್ ಘಾಟ್‌ನ ತಿರುವಿನಲ್ಲಿ ಪದೇ ಪದೇ ಅಪಘಾತವಾಗುತ್ತಿದೆ. ಈ ಕುರಿತು ಗಮನ ಹರಿಸದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಅಪಘಾತ ವಲಯವನ್ನು ಬಿಟ್ಟು ಬೇರೆ ಕಡೆ ದುರಸ್ತಿ ಕಾರ್ಯ ಮಾಡಿ ಏನು ಪ್ರಯೋಜನ? ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನಿಸಿದ್ದಾರೆ. `ಅಪಘಾತವಾಗುವ ಸ್ಥಳಗಳಲ್ಲಿನ ರಸ್ತೆ ತಿರುವನ್ನು ಅಗಲೀಕರಣ ಮಾಡಬೇಕು’ ಎಂದು ಅವರು ಸೂಚಿಸಿದ್ದಾರೆ. `ರಾಷ್ಟ್ರೀಯ ಹೆದ್ದಾರಿ, ಆರ್‌ಬಿಐ ಸಂಸ್ಥೆಯ ಅಧಿಕಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಚಿಕ್ಕ ಪುಟ್ಟ ಸಮಸ್ಯೆಗಳಿದ್ದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷö್ಯಸಹಿಸುವುದಿಲ್ಲ’ ಎಂದವರು ಎಚ್ಚರಿಸಿದ್ದಾರೆ.
ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ ಅಪಘಾತಗಳಿಗೆ ಕಾರಣಗಳ ಕುರಿತ ವರದಿಯನ್ನು ಸಂಬoಧಪಟ್ಟ ಅಧಿಕಾರಿಗಳಿಗೆ ಸಲ್ಲಿಸುವಂತೆ ಸಂಸದರು ಪೊಲೀಸ್ ಇಲಾಖೆಗೆ ಸೂಚಿಸಿದರು. `ಪೊಲೀಸ್ ಇಲಾಖೆಯಿಂದ ಗುರುತಿಸಿರುವ ಸ್ಥಳಗಳಲ್ಲಿ ಸ್ಪಷ್ಟವಾಗಿ ಗೋಚರಿಸುವಂತೆ ಸೂಚನಾ ಫಲಕ ಮತ್ತು ರಿಪ್ಲೆಕ್ಟರ್‌ಗಳನ್ನು ಅಳವಡಿಸಬೇಕು’ ಎಂದು ನಿರ್ದೇಶಿಸಿದರು. `ಹೆದ್ದಾರಿಗಳಲ್ಲಿ ಬೀಡಾಡಿ ದನಗಳಿಂದ ಅಪಘಾತಗಳಾಗುವುದನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತ್ತಾ ಕ್ರಮವಾಗಿ ವಾರಸುದಾರರು ಇಲ್ಲದಿರುವ ಬೀಡಾಡಿ ದನಗಳನ್ನು ನಿಯಂತ್ರಿಸಬೇಕು’ ಎಂದು ಪಶುಪಾಲನಾ ಇಲಾಖೆ ಹಾಗೂ ನಗರ ಸ್ಥಳೀಯ ಸ್ಥಳೀಯ ಸಂಸ್ಥೆಗಳಿಗೆ ತಿಳಿಸಿದರು.
`ಪ್ರಸ್ತುತ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟ ಕಂಡುಬoದಲ್ಲಿ ಅದನ್ನು ಸಹಿಸುವುದಿಲ್ಲ. ಕಾಮಗಾರಿಯಲ್ಲಿ ನಿರ್ಲಕ್ಷತನ ತೋರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ’ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು. `ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಜಿಲ್ಲೆಗೆ ಶಾಪವಾಗಿ ಪರಿಣಮಿಸಿವೆ. ಕಾಮಗಾರಿ ಆರಂಭಗೊoಡು ಇಷ್ಟು ವರ್ಷಗಳು ಕಳೆದರೂ ಇನ್ನೂ ಸಂಪೂರ್ಣವಾಗಿಲ್ಲ. ರಸ್ತೆ ಅಪಘಾತಗಳಿಂದ ಜನರು ಸಾವಿಗೀಡಾಗುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಾರ್ವಜನಿಕರಿಂದ ನಿರಂತರ ಟೀಕೆಗಳನ್ನು ಎದುರಿಸುತ್ತಿದ್ದಾರೆ’ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ್ ಹಾಗೂ ಹೆದ್ದಾರಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತಿತರರು ಇದ್ದರು.