KDCC ಬ್ಯಾಂಕ್ ಚುನಾವಣೆಗೆ ಎರಡು ದಿನ ಬಾಕಿಯಿದ್ದು, ಕೊನೆ ಕ್ಷಣದಲ್ಲಿ ಅಧಿಕಾರಿಯೊಬ್ಬರು ಅಭ್ಯರ್ಥಿ ಪರ ಪ್ರಚಾರಕ್ಕಿಳಿದ್ದಿದ್ದಾರೆ. ‘ತಾವು ಸೂಚಿಸಿದ ಅಭ್ಯರ್ಥಿಗೆ ಮತ ಹಾಕದೇ ಇದ್ದರೆ ನಿಮ್ಮ ಸಹಕಾರಿ ಸಂಘದ ವಿರುದ್ಧ ತನಿಖೆ ನಡೆಸಿ ಸೊಸೈಟಿ ಬಾಗಿಲು ಮುಚ್ಚಿಸುವೆ‘ ಎಂದು ಆ ಅಧಿಕಾರಿ ಬೆದರಿಕೆ ಒಡ್ಡುತ್ತಿದ್ದಾರೆ.
‘ಗುಡಿಯಲ್ಲಿರುವ ರಾಘವೇಂದ್ರ’ ಸ್ವಾಮಿಯ ಹೆಸರಿನಲ್ಲಿ ಈ ಅಧಿಕಾರಿ ಮತದಾರರಿಗೆ ಬೆದರಿಸುತ್ತಿದ್ದಾರೆ. ಈ ವೇಳೆ ಉಸ್ತುವಾರಿ ಸಚಿವರ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅಡ್ಡದಾರಿಹಿಡಿದಾದರೂ ಕೆಡಿಸಿಸಿ ನಿರ್ದೇಶಕರಾಗಬೇಕು ಎಂದು ಬಯಸಿದವರಿಗೆ ಅಧಿಕಾರಿಯ ಮತಯಾಚನೆ ಮುಳುವಾಗುವ ಸಾಧ್ಯತೆಗಳಿವೆ.
‘ಅಭ್ಯರ್ಥಿಗಳ ಪರ ಮೊದಲು ಮತ ಯಾಚನೆ ನಡೆಯಿತು. ಅದಾದ ನಂತರ ಆಮೀಷ ಒಡ್ಡಲಾಯಿತು. ಇದೀಗ ಅಧಿಕಾರಿಗಳ ಮೂಲಕ ಬೆದರಿಸುವ ಕೆಲಸ ನಡೆಯುತ್ತಿದೆ’ ಎಂದು ಮತದಾರರೊಬ್ಬರು ಬೇಸರವ್ಯಕ್ತಪಡಿಸಿದರು. ‘ಈ ಹಿಂದೆ ನಡೆದ ಸೊಸೈಟಿ ಚುನಾವಣೆಯಲ್ಲಿಯೂ ಆ ಅಧಿಕಾರಿ ಅನಗತ್ಯವಾಗಿ ಕೈ ಆಡಿಸಿದ್ದರು. ಮತದಾರರಿಗೆ ಬೆದರಿಕೆ ಒಡ್ಡುವುದಕ್ಕಾಗಿ ಆ ಅಧಿಕಾರಿ ಪೋನ್ ಪೇ ಮೂಲಕ ಲಂಚ ಸ್ವೀಕರಿಸಿದ್ದಾರೆ’ ಎಂದು ಮತ್ತೊಬ್ಬರು ವಿವರಿಸಿದರು.
ಆ ಅಧಿಕಾರಿ ಆದಾಯಕ್ಕೂ ಮೀರಿ ಆಸ್ತಿ ಮಾಡಿದ್ದು, ಚುನಾವಣೆ ಮುಗಿದ ನಂತರ ಆ ಬಗ್ಗೆ ಲೋಕಾಯುಕ್ತರ ಗಮನಕ್ಕೆ ತರಲು ಕೆಲವರು ನಿರ್ಧರಿಸಿದ್ದಾರೆ. ಆ ಅವಧಿಯಲ್ಲಿ ಪೋನ್ ಪೇ ಮೂಲಕ ಅಕ್ರಮ ಹಣ ವರ್ಗಾವಣೆ ನಡೆದಿರುವುದನ್ನು ಸಾಕ್ಷಿಯಾಗಿ ನೀಡಲು ಸಿದ್ಧತೆ ನಡೆಸಿದ್ದಾರೆ.
ಸಿದ್ದಾಪುರ-ಕುಮಟಾ ಗಡಿ ಅಂಚಿನ ಸೊಸೈಟಿಯವರ ಋಣ ತೀರಿಸುವುದಕ್ಕಾಗಿ ಆ ಸಣ್ಣ ಅಧಿಕಾರಿ ಈ ಪ್ರಚಾರ ಕೆಲಸ ಮಾಡುತ್ತಿರುವ ಬಗ್ಗೆ ಅನುಮಾನಗಳಿವೆ. ಆ ಸೊಸೈಟಿ ಅಧ್ಯಕ್ಷರು ಹಾಗೂ ಈ ಅಧಿಕಾರಿ ನಡುವಿನ ವ್ಯವಹಾರಿಕ ಸಂಬಂಧವೂ ಚರ್ಚೆಯ ಮುನ್ನಲೆಗೆ ಬಂದಿದೆ.