ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕಾಗಿ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಸಚಿವ ಮಂಕಾಳು ವೈದ್ಯ ಬಣದ ನಡುವೆ ನಡೆದ ಹಣಾಹಣಿಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಬಣದವರು ಮುನ್ನಡೆ ಸಾಧಿಸಿದ್ದಾರೆ. ಶಿವರಾಮ ಹೆಬ್ಬಾರ್ ಸಹ 6ನೇ ಬಾರಿ ಈ ಚುನಾವಣೆಯಲ್ಲಿ ಗೆದ್ದಿದ್ದಾರೆ.
`ಯಾವುದೇ ಆಮಿಷ, ಅಹಂಕಾರ, ದರ್ಪಕ್ಕೆ ಮತದಾರರು ಮಣಿಯಲಿಲ್ಲ. ಹೀಗಾಗಿ ತಾನು ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ’ ಎಂದು ಶಿವರಾಮ ಹೆಬ್ಬಾರ್ ಗೆಲುವಿನ ನಂತರ ಮಾಧ್ಯಮಕ್ಕೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. `ಜಿಲ್ಲೆಯ ರೈತರ ಹಾಗೂ ಸಹಕಾರಿ ಸಂಘಗಳ ಹಿತ ಕಾಯುವುದೇ ನನ್ನ ಆದ್ಯತೆ’ ಎಂದವರು ಘೋಷಿಸಿದ್ದಾರೆ.
ಶಿವರಾಮ ಹೆಬ್ಬಾರ್ ಅವರ ವಿರುದ್ಧ ಸ್ಪರ್ಧಿಸಿದ್ದ ಗೋಪಾಲಕೃಷ್ಣ ಗಾಂವ್ಕರ್ ಅವರು ಸೋಲು ಅನುಭವಿಸಿದ್ದು, ಶಿವರಾಮ ಹೆಬ್ಬಾರ್ ಅವರು ತಮ್ಮ ಬಣದಿಂದ ಸ್ಪರ್ಧಿಸಿದ್ದ ಮುಂಡಗೋಡಿನ ಎಚ್ ಎಂ ನಾಯ್ಕ ಅವರನ್ನು ಗೆಲ್ಲಿಸಿದ್ದಾರೆ. ಆ ಮೂಲಕ ಮಂಕಾಳು ವೈದ್ಯ ಬಣದ ಎಲ್ ಟಿ ಪಾಟೀಲ್ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ. ಎಲ್.ಟಿ.ಪಾಟೀಲ ಅವರು ಐದು ಮತಪಡೆದಿದ್ದು, ಎಂ ಎಚ್ ನಾಯ್ಕ ಅವರು 8 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ.
ಈವರೆಗಿನ ಲೆಕ್ಕಾಚಾರದ ಪ್ರಕಾರ ಶಿವರಾಮ್ ಹೆಬ್ಬಾರ್ ಬಣದ 6 ಜನ ಅಭ್ಯರ್ಥಿಗಳು ಗೆದ್ದಿದ್ದಾರೆ. ಮಂಕಾಳು ವೈದ್ಯ ಬಣದ ಇಬ್ಬರು ಮಾತ್ರ ಗೆದ್ದಿದ್ದಾರೆ. ಅರ್ಬನ್ ಬ್ಯಾಂಕ್ ಹಾಗೂ ಕೃಷಿಯೇತರ ಸಹಕಾರ ಸಂಘಗಳ ಕ್ಷೇತ್ರದ ಪೈಕಿ ಮೋಹನ ನಾಯಕ ಗೋಕರ್ಣ ಅವರು 92 ಮತಪಡೆದಿದ್ದು, ಮೋಹನ ನಾಯಕ ಅವರು 90 ಮತಪಡೆದಿದ್ದಾರೆ. ಮಹಿಳಾ ಅಭ್ಯರ್ಥಿಯಾಗಿ ಕಣಕ್ಕಿಳಿದ ಸರಸ್ವತಿ ಎನ್ ರವಿ ಅವರಿಗೆ 4 ಮತಗಳು ಬಿದ್ದಿವೆ. ವಸಂತ ನಾಯಕ ಅವರು 21 ಮತಗಳನ್ನುಪಡೆದಿದ್ದಾರೆ.

ಹಳಿಯಾಳ ಕ್ಷೇತ್ರದಿಂದ ಮಾಜಿ ಎಂಎಲ್ಸಿ ಎಸ್ ಎಲ್ ಘೋಟ್ನೆಕರ್ ಗೆಲುವಿನ ನಗೆ ಬೀರಿದ್ದಾರೆ. ಮಂಕಾಳು ವೈದ್ಯ ಬಣದಿಂದ ಸ್ಪರ್ಧಿಸಿದ್ದ ಸುಭಾಶ್ ಕೊರ್ವೆಕರ್ ಸೋತಿದ್ದಾರೆ. ಅಂಕೋಲಾ, ಕುಮಟಾ, ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಂಘಗಳ ಕ್ಷೇತ್ರದಲ್ಲಿ ಹೆಬ್ಬಾರ್ ಬಣದವರು ಮುನ್ನಡೆ ಸಾಧಿಸಿದ್ದು ಯಲ್ಲಾಪುರ ಹಾಗೂ ಹಳಿಯಾಳ ಕ್ಷೇತ್ರಗಳು ಶಿವರಾಮ ಹೆಬ್ಬಾರ್ ಅವರ ತಕ್ಕೆಗೆ ಸಿಕ್ಕಿವೆ.
ಗೋಕರ್ಣದ ರಾಜಗೋಪಾಲ ಅಡಿ ಗೆದ್ದಿದ್ದಾರೆ. ಜೊಯಿಡಾದ ಕೃಷ್ಣ ದೇಸಾಯಿ ಅವರು ಗೆದ್ದಿದ್ದಾರೆ. ಮಂಕಾಳು ವೈದ್ಯ ಬಣದಿಂದ ಭಟ್ಕಳ ಹಾಗೂ ಹೊನ್ನಾವರ ಕ್ಷೇತ್ರಗಳಲ್ಲಿ ಮಾತ್ರ ಅವಿರೋಧ ಆಯ್ಕೆ ನಡೆದಿದೆ. 46 ಮತಗಳ ಎಣಿಕೆಗೆ ನ್ಯಾಯಾಲಯ ತಡೆಯಾಜ್ಞೆಯಿದ್ದು, ಇನ್ನೂಳಿದ ಮಾಹಿತಿಯನ್ನೊಳಗೊಂಡ ಪ್ರತ್ಯೇಕ ವರದಿ ಶೀಘ್ರದಲ್ಲಿಯೇ ಪ್ರಸಾರವಾಗಲಿದೆ.