ಸಾಕಷ್ಟು ಹೋರಾಟದ ನಂತರ ಕಾರವಾರಕ್ಕೆ ವೈದ್ಯಕೀಯ ವಿಜ್ಞಾನ ಕಾಲೇಜು ಬಂದಿದ್ದು, ಸದ್ಯ ಅಲ್ಲಿ ನಿರ್ದೇಶಕರಾಗಿರುವ ಡಾ ಪೂರ್ಣಿಮಾ ಅವರಿಗೆ ಅನುಭವ ಕೊರತೆ ಕಾಡುತ್ತಿದೆ. ಸಿಬ್ಬಂದಿ ಮೇಲಿನ ನಿಯಂತ್ರಣ ಇಲ್ಲದ ಕಾರಣ ಸಂಸ್ಥೆಯ ಆಡಳಿತ ಅಸ್ತವ್ಯಸ್ತವಾಗಿದೆ
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಭಾರ ನಿರ್ದೇಶಕಿ ಡಾ ಪೂರ್ಣಿಮಾ ಅವರಿಗೆ ಸಂಸ್ಥೆ ಹಾಗೂ ಸಂಸ್ಥೆಯ ಸಿಬ್ಬಂದಿಗಳ ಮೇಲೆ ಹಿಡಿತ ಇಲ್ಲದ ಬಗ್ಗೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಬೇಸರವ್ಯಕ್ತಪಡಿಸಿದ್ದಾರೆ. `ಕರಾವಳಿಯಲ್ಲಿರುವ ಏಕೈಕ ಸರ್ಕಾರಿ ಮೆಡಿಕಲ್ ಕಾಲೇಜು ಉಳಿಸಿಕೊಳ್ಳಲು ಮತ್ತೆ ಹೋರಾಟ ಅನಿವಾರ್ಯ’ ಎಂಬ ಅರ್ಥದಲ್ಲಿ ಮಾಧವ ನಾಯಕ ಅವರು ಮಾತನಾಡಿದ್ದಾರೆ.
`ಕಿಮ್ಸ್’ಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ವರ್ಷದಿಂದ ವರ್ಷಕ್ಕೆ ಇಲ್ಲಿ ದಾಖಲಾತಿ ಪ್ರಮಾಣ ಇಳಿಕೆಯಾಗುತ್ತಿದೆ’ ಎಂದು ಮಾಧವ ನಾಯಕ ಆತಂಕವ್ಯಕ್ತಪಡಿಸಿದ್ದಾರೆ. `ಇಲ್ಲಿನ ಕೆಲ ತಜ್ಞ ವೈದ್ಯರು ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಇತ್ತೀಚೆಗೆ ಮೀನಿನ ಮುಳ್ಳು ಹೊಟ್ಟೆಗೆ ತಗುಲಿ ಮೀನುಗಾರ ಯುವಕನೊಬ್ಬ ಸಾವನಪ್ಪಿದ್ದು, ಅದಕ್ಕೆ ಸಹ ಕಿಮ್ಸ್ ಸಿಬ್ಬಂದಿ ಲೋಪ ಕಾರಣ’ ಎಂದವರು ವಿಶ್ಲೇಷಿಸಿದ್ದಾರೆ.
`ನಿರ್ದೇಶಕರು ಗೃಹ ವೈದ್ಯರುಗಳ (ಇಂಟರ್ನ್ಸ್ ವೈದ್ಯರು) ಮೇಲೆ ಅವಲಂಬಿತರಾಗಿ ಸಂಸ್ಥೆಯ ಆಸ್ಪತ್ರೆಯನ್ನು ನಡೆಸುತ್ತಿರುವಂತೆ ಭಾಸವಾಗುತ್ತಿದೆ. ಅದೇ ಗೃಹ ವೈದ್ಯರುಗಳಿಗೆ ಪ್ರತಿ ತಿಂಗಳು ಬರುತ್ತಿದ್ದ 30 ಸಾವಿರ ರೂ ಸ್ಟೈಫಂಡ್ ಕಳೆದ ಎರಡೂವರೆ ತಿಂಗಳಿoದ ಬಂದಿಲ್ಲ. ಹೀಗಾಗಿ ಅವರಿಗೆ ದೀಪಾವಳಿ ಹಬ್ಬದ ಸಡಗರವೂ ಇಲ್ಲ’ ಎಂದು ಮಾಧವ ನಾಯಕ ಅವರು ಮಾಹಿತಿ ನೀಡಿದ್ದಾರೆ.
`ಈ ಬಗ್ಗೆ ಕೇಳಿದರೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ನಮ್ಮ ಕೈನಲ್ಲಿ ಏನು ಇಲ್ಲ ಎನ್ನುತ್ತಾರೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರಿಗೂ ತಿಳಿಸಿದ್ದಾಗಿ ಹೇಳಿದಾಗ ಮಾತು ಬದಲಿಸಿ, ‘ಬೇರೆ ಕಡೆಯಿಂದ ನಿಂದ ಪಾವತಿ ಮಾಡುತ್ತೇವೆ ಅಂತ ಸಬೂಬು ಹೇಳುತ್ತಾರೆ. ಇಷ್ಟೇ ಅಲ್ಲದೇ, ಗೃಹ ವೈದ್ಯರುಗಳಿಗೆ ಮೊದಲು ತಿಂಗಳಿಗೆ ಇದ್ದ ಒಂದು ಸಾವಿರ ರೂ. ಹಾಸ್ಟೆಲ್ ಫೀಸ್, ನಿರ್ದೇಶಕರು ಬದಲಾದ ಬಳಿಕ ಎರಡು ಸಾವಿರಕ್ಕೆ ಏರಿದೆ. ಇದನ್ನು ಕೇಳಿದರೂ ಹಾವೇರಿಯಲ್ಲಿ ಹೇಗೆ ಮಾಡಿದ್ದರೋ ಆ ರೀತಿ ಮಾಡಲು ಸರ್ಕಾರ ಹೇಳಿದೆ ಅದರಂತೆ ಮಾಡುತ್ತಿದ್ದೇವೆ ಎನ್ನುತ್ತಾರೆ. ಆದರೆ, ಹಾವೇರಿಯ ಕಾಲೇಜಿನ ನಿರ್ದೇಶಕರಾದ ಡಾ ಪ್ರದೀಪ್ ಅವರನ್ನು ಈ ಬಗ್ಗೆ ಫೋನಾಯಿಸಿ ಕೇಳಿದರೆ, ಅಲ್ಲಿ ಹಾಸ್ಟೆಲ್ ಫೀಸ್ ಪ್ರತಿ ತಿಂಗಳು 1200 ಇದೆ’ ಎಂಬ ಮಾಹಿತಿಯನ್ನು ಮಾಧವ ನಾಯಕ ಅವರು ರಿಯಾಲಿಟ್ ಚೆಕ್ ಮೂಲಕ ಕಂಡುಕೊoಡಿದ್ದಾರೆ. ಹುಬ್ಬಳ್ಳಿ ಕಾಲೇಜಿನ ಡಾ.ಈಶ್ವರ್ ಹೊಸ್ಮನಿ, ಬೆಳಗಾವಿ ಕಾಲೇಜಿನ ಡಾ ಅಶೋಕಕುಮಾರ್ ಶೆಟ್ಟಿ ಅವರಿಗೂ ಮಾಧವ ನಾಯಕ ಅವರು ಫೋನ್ ಮಾಡಿದ್ದು, ಅಲ್ಲಿಯೂ 1,200 ರೂಪಾಯಿಗಳಿಗಿಂತ ಕಡಿಮೆಯಿರುವುದು ಗೊತ್ತಾಗಿದೆ.