ಕಾರವಾರ ನಗರಸಭೆಯ ಕೆಲಸ ಮಾಡಿಯೂ ಹಣ ಪಾವತಿ ಆಗದ ಹಿನ್ನಲೆ ಗುತ್ತಿಗೆದಾರರು ಸಂಕಷ್ಟ ಅನುಭವಿಸುತ್ತಿದ್ದು, ಗುರುವಾರವೂ ಗುತ್ತಿಗೆದಾರರು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿದ್ದಾರೆ. 2021-22ನೇ ಸಾಲಿನಿಂದ ಈವರೆಗೂ ಕೆಲಸ ಮಾಡಿದ ಹಣ ಪಾವತಿ ಆಗದ ಬಗ್ಗೆ ವಿವರಿಸಿದ್ದಾರೆ.
`ಅನೇಕ ಗುತ್ತಿಗೆದಾರರು ಸಾಲ ಮಾಡಿ ಸರ್ಕಾರಿ ಕೆಲಸ ನಿರ್ವಹಿಸಿದ್ದಾರೆ. ನಗರಸಭೆಯಿಂದ ಬಿಲ್ ಪಾವತಿ ಆಗದ ಕಾರಣ ಗುತ್ತಿಗೆದಾರರು ಆರ್ಥಿಕವಾಗಿ ಕುಗ್ಗಿದ್ದಾರೆ. ಸಾಲ ನೀಡಿದ ಬ್ಯಾಂಕುಗಳು ಬಡ್ಡಿ ಪಾವತಿಸುವಂತೆ ಒತ್ತಾಯಿಸುತ್ತಿದ್ದು, ಗುತ್ತಿಗೆದಾರರ ಬಳಿ ಬಡ್ಡಿ ಪಾವತಿಗೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಕಾರವಾರ ತಾಲೂಕಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿಜಯ ಬಿಲಿಯೇ ವಿವರಿಸಿದರು.
`ಈ ಸಮಸ್ಯೆ ಬಗ್ಗೆ ಶಾಸಕ, ಜಿಲ್ಲಾಧಿಕಾರಿ, ನಗರಸಭೆ ಆಯುಕ್ತರ ಜೊತೆ ಸಭೆ ನಡೆಸಲಾಗಿದೆ. ಸಮಸ್ಯೆ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ. ಹಳೆ ಬಾಕಿ ಪಾವತಿ ನಂತರವೇ ಹೊಸ ಕಾಮಗಾರಿ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಅದಾದ ನಂತರ ನಗರಸಭೆ ತುರ್ತು ಕಾಮಗಾರಿ ನಡೆಸಿದರೂ ಗುತ್ತಿಗೆದಾರರು ಆಕ್ಷೇಪವ್ಯಕ್ತಪಡಿಸಿಲ್ಲ. ಅದಾಗಿಯೂ ಗುತ್ತಿಗೆದಾರರಿಗೆ ಬಿಲ್ ಮೊತ್ತ ಪಾವತಿಸದೇ ಇರುವುದು ಸರಿಯಲ್ಲ’ ಎಂದು ಅವರು ಹೇಳಿದರು.
`ಸದ್ಯ ನಗರಸಭೆಯಿಂದ ಮತ್ತೆ ಕೋಟ್ಯಂತರ ರೂಪಾಯಿಯ ಕಾಮಗಾರಿ ನಡೆಸಲಾಗುತ್ತಿದೆ. ಈ ಬಗ್ಗೆ ಟೆಂಡರ್ ಕರೆಯಲಾಗಿದ್ದು, ಹಳೆಯ ಬಾಕಿ ಪಾವತಿ ನಂತರವೇ ಹೊಸ ಕಾಮಗಾರಿ ಶುರು ಮಾಡಬೇಕು’ ಎಂದು ಆಗ್ರಹಿಸಿದರು. ತಕ್ಷಣ ತಮ್ಮ ಫೋನ್ ತೆಗೆದುಕೊಂಡ ನಗರಸಭೆ ಯೋಜನಾ ನಿರ್ದೇಶಕ ಜಾಹಿರ ಅಬ್ಬಾಸ್ ಅವರು ನಗರಸಭೆ ಲೆಕ್ಕಾಧಿಕಾರಿಗಳ ಜೊತೆ ಮಾತನಾಡಿದರು. ಬಿಲ್ ಬಾಕಿಯ ಎಲ್ಲಾ ಕಡತಗಳನ್ನು ಹಿಡಿದು ನವೆಂಬರ್ 3ರಂದು ಕಚೇರಿಗೆ ಬರುವಂತೆ ಸೂಚಿಸಿದರು.
`ಸಂಘಟನೆ ಪ್ರಮುಖರಾದ ಛತ್ರಪತಿ ಮಾಳಸೇಕರ್, ಸತೀಶ ವಿ ನಾಯ್ಕ, ಡಿ ಕೆ ನಾಯ್ಕ, ಸಿದ್ಧಾರ್ಥ ನಾಯ್ಕ, ಮನೋಜಕುಮಾರ ನಾಯ್ಕ, ರೋಹಿದಾಸ ಕೋಠಾರಕg, ರವೀಂದ್ರ ತಳ್ಳೇಕರ್ ಇತರರು ತಮ್ಮ ಸಮಸ್ಯೆ ವಿವರಿಸಿದರು. ನವೆಂಬರ್ 3ರಂದು ಸಭೆ ನಡೆಸಿ ಆ ನಂತರ ಸಮಸ್ಯೆಗೆ ಸ್ಪಂದಿಸುವೆ’ ಎಂದು ನಗರಸಭೆ ಯೋಜನಾ ನಿರ್ದೇಶಕ ಜಾಹಿರ ಅಬ್ಬಾಸ್ ಅವರು ಪ್ರತಿಕ್ರಿಯಿಸಿದರು.