ಯಲ್ಲಾಪುರದ ಆರ್ ಜಿ ಭಟ್ಟ ಅವರ ಮನೆಗೆ ನಾಗರ ಹಾವಿನ ಆಗಮನವಾಗಿದ್ದು, ಎನಿಮಲ್ ವೆಲ್‌ಫೆರ್ & ರಿಸರ್ಜ ಪೌಂಡೇಶನ್ ಕಾರ್ಯಕರ್ತರು ಆ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಯಲ್ಲಾಪುರದ ಆನಗೋಡಿನಲ್ಲಿ ಆರ್ ಜಿ ಭಟ್ಟ ಅವರು ಸ್ಲಾಪಿನ ಮನೆ ಹೊಂದಿದ್ದಾರೆ. ಆ ಮನೆಗೆ ತಾಗಿ ಗಿಡ ಬೆಳೆದಿದ್ದು, ಇಲಿ ಬೆನ್ನಟ್ಟಿದ ನಾಗರಹಾವು ಆ ಹೂವಿನ ಗಿಡದ ಮೂಲಕ ಮನೆ ಒಳಗೆ ಪ್ರವೇಶಿಸಿದೆ. ಆದರೆ, ಮನೆಯೊಗೆ ಟೈಲ್ಸ ಹಾಗೂ ಗ್ರಾನೆಟ್ ಅಳವಡಿಸಿದ ಕಾರಣ ಹಾವಿಗೆ ಮುಂದೆ ಚಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅಲ್ಲಿದ್ದ ಟಿಪಾಯಿ ಅಡಿ ಹಾವು ಆಶ್ರಯಪಡೆದಿದ್ದು, ಅದಾದ ನಂತರ ಸಮೀಪದ ಪುಸ್ತಕ ರಾಶಿಯಲ್ಲಿ ಅವಿತುಕೊಂಡಿದೆ.
ಹಾವನ್ನು ನೋಡಿದ ಆರ್ ಜಿ ಭಟ್ಟ ಕುಟುಂಬದವರು ಹೌಹಾರಿದ್ದಾರೆ. ಅದಾದ ನಂತರ ಅರಣ್ಯ ಇಲಾಖೆಯವರಿಗೆ ಫೋನ್ ಮಾಡಿದ್ದು, ಅರಣ್ಯ ಇಲಾಖೆಯವರು ಉರಗ ತಜ್ಞ ಅಕ್ಬರ್ ಅವರ ಫೋನ್ ನಂ ಕೊಟ್ಟಿದ್ದಾರೆ. ಅಕ್ಬರ್ ಅವರು ಎನಿಮಲ್ ವೆಲ್‌ಫೆರ್ & ರಿಸರ್ಜ ಪೌಂಡೇಶನ್’ನ ದತ್ತಾತ್ರೇಯ ಮುರ್ಕುಟೆ ಅವರ ಜೊತೆ ಆನಗೋಡಿನ ಭಟ್ಟರ ಮನೆಗೆ ಭೇಟಿ ನೀಡಿದ್ದಾರೆ.
ಆವರೆಗೂ ನಾಗರ ಹಾವು ಪುಸ್ತಕ ರಾಶಿಯ ಅಡಿಯೇ ಅವಿತಿದ್ದು, ಉರಗ ತಜ್ಞರು ಅದನ್ನು ಉಪಾಯವಾಗಿ ಹೊರತೆಗೆದರು. ಹಾವಿನ ಬಗ್ಗೆ ಅರಿವು ಮೂಡಿಸಿ ಅದನ್ನು ಅರಣ್ಯಕ್ಕೆ ಬಿಟ್ಟರು. ಹಾವು ಆಗಮನದಿಂದ ಆತಂಕಗೊoಡಿದ್ದ ಭಟ್ಟರ ಕುಟುಂಬದವರು ನಿರಾಳರಾದರು.