ಕಾರವಾರ ನಗರದಲ್ಲಿ ಹಾದುಹೋಗಿರುವ ರಸ್ತೆಗಳ ಅವ್ಯವಸ್ಥೆ ಖಂಡಿಸಿ ಜನ ಪ್ರತಿಭಟಿಸಿದ್ದಾರೆ. ನಗರಸಭೆ ಕಾರ್ಯವೈಖರಿಯ ವಿರುದ್ಧ ಸಿಡಿದೆದ್ದಿದ್ದಾರೆ.
ಕಾರವಾರ ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಹಬ್ಬುವಾಡ-ಕೈಗಾ ರಸ್ತೆ ವಾಹನ ಓಡಾಟಕ್ಕೆ ಯೋಗ್ಯವಾಗಿಲ್ಲ. ಪಾದಚಾರಿಗಳು ಸಹ ಇಲ್ಲಿ ಎಡವಿ ಬೀಳುವಷ್ಟರ ಮಟ್ಟಿಗೆ ಹೊಂಡಗಳು ತುಂಬಿದ್ದು, ಇದೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲಿಯೂ ನಿತ್ಯ ನೂರಾರು ಬಾರಿ ಈ ರಸ್ತೆಯಲ್ಲಿ ಓಡಾಡುವ ರಿಕ್ಷಾ ಚಾಲಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ರಿಕ್ಷಾದ ಚಕ್ರಗಳು ಮುಳುಗುವಷ್ಟು ಆಳ-ಅಗಲದ ಗುಂಡಿಗಳು ಇಲ್ಲಿವೆ.
`ಗುಂಡಿಗಳಿAದ ಕೂಡಿದ ರಸ್ತೆಯಿಂದ ಆಕ್ರೋಶಗೊಂಡ ಕಾರವಾರದ ಜನ ಪಾದಯಾತ್ರೆ ನಡೆಸಿದ್ದು, ನಗರಸಭೆಗೆ ಆಗಮಿಸಿ ಮುತ್ತಿಗೆ ಹಾಕಿದ್ದಾರೆ. ಕಾರವಾರ-ಹಬ್ಬುವಾಡ-ಕೈಗಾ ಅಣು ಘಟಕಕ್ಕೆ ತೆರಳುವ ಈ ರಸ್ತೆಯಲ್ಲಿ ರೈಲು ನಿಲ್ದಾಣ ಬರುತ್ತದೆ. ವಿವಿಧ ಕಡೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹದಗೆಟ್ಟಿದ್ದರಿಂದ ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು.
`ತಿಂಗಳ ಹಿಂದೆ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಐದೇ ದಿನದಲ್ಲಿ ರಸ್ತೆ ಸರಿಪಡಿಸಿಕೊಡುವುದಾಗಿ ಹೇಳಿದ ಭರವಸೆಯೂ ಈಡೇರಿಲ್ಲ’ ಎಂದು ಕಿಡಿಕಾರಿದರು. `ಹದಗೆಟ್ಟ ರಸ್ತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ವೃದ್ಧರು ಹಾಗೂ ಅಸಾಯಕರ ಪರಿಸ್ಥಿತಿ ಶೋಚನೀಯವಾಗಿದೆ. ಸುಂಕೇರಿ, ಕೋಡಿಭಾಗ್ ಭಾಗದ ರಿಕ್ಷಾ ಚಾಲಕರು ಈ ರಸ್ತೆಗೆ ಹೋಗಲು ಹೆದರುತ್ತಾರೆ’ ಎಂದು ಜನ ವಿವರಿಸಿದರು. ರಸ್ತೆ ಹಾಳಾಗಿದ್ದರಿಂದ ಪದೇ ಪದೇ ವಾಹನ ಹಾಳಾಗುತ್ತಿರುವ ಬಗ್ಗೆಯೂ ವಿವರಿಸಿದರು.
`ಮೂರು ಬಾರಿ ಗುಂಡಿ ತುಂಬುವ ಕೆಲಸ ಮಾಡಿದರೂ ಮಳೆಯಿಂದ ಅದು ಹಾಳಾಗಿದೆ. ಸದ್ಯ 15 ಕೋಟಿ ಅನುದಾನದಲ್ಲಿ ಆಯ್ದ ಸ್ಥಳಗಳಲ್ಲಿ ನೂತನ ರಸ್ತೆ ನಿರ್ಮಿಸಲು ಟೆಂಡರ್ ನೀಡಲಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಇಲಾಖೆಯಿಂದದ ಗುತ್ತಿಗೆ ನೀಡಲಾಗಿದ್ದು, ಜಿ ಕೆ ರಾಮ್ ಕನ್‌ಸ್ಟ್ರಕ್ಶನ್ ಕಂಪನಿ ಅಭಿವೃದ್ಧಿ ಕೆಲಸ ಮಾಡಲಿದೆ’ ಎಂದು ನಗರಸಭೆ ಅಧಿಕಾರಿಗಳು ಸಮಜಾಯಿಶೀ ನೀಡಿದರು.