ಶಿರಸಿಯ ಬೆಟ್ಟಕೊಪ್ಪದಲ್ಲಿ ಪ್ರತಿ ವರ್ಷ ನಡೆಯುವ `ನಮ್ಮನೆ ಹಬ್ಬ’ಕ್ಕೆ ಈ ಬಾರಿ ಚಲನಚಿತ್ರ ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿದ ಬಿ ಜಯಶ್ರೀ ಅವರು ಆಗಮಿಸಲಿದ್ದಾರೆ. ಅವರ ಜೊತೆ ಔಷಧೀಯ ಕ್ಷೇತ್ರದಲ್ಲಿ ಜಗತ್ತಿಗೆ ಉಪಕಾರಿಯಾಗುವ ಕಾರ್ಯ ಮಾಡುತ್ತಿರುವ ರಾಮನಂದನ ಹೆಗಡೆ ದೊಡ್ಮನೆ ಹಾಗೂ ಬಹುಮುಖ ಪ್ರತಿಭೆಯ ವಿದ್ಯಾರ್ಥಿ ತೇಜಸ್ವಿ ಗಾಂವಕರ ಅವರು ಬರುತ್ತಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ `ನಮ್ಮನೆ ಹಬ್ಬ’ ನಡೆಯಲಿದ್ದು, ಈ ಹಬ್ಬದಲ್ಲಿ ಈ ಮೂವರು ಸಾಧಕರಿಗೆ `ನಮ್ಮನೆ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಸಾಹಿತ್ಯ, ಸಾಂಸ್ಕೃತಿಕ, ಗ್ರಾಮಾಭ್ಯುದಯ ಕೆಲಸ ಮಾಡುತ್ತಿರುವ ವಿಶ್ವಶಾಂತಿ ಸೇವಾ ಟ್ರಸ್ಟ್ ವಾರ್ಷಿಕವಾಗಿ ನೀಡುವ ಪ್ರತಿಷ್ಠಿತ `ನಮ್ಮನೆ ಪ್ರಶಸ್ತಿ’ಯನ್ನು ಪ್ರಕಟಿಸಿದೆ. ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿದ ಬಿ ಜಯಶ್ರೀ ಹಾಗೂ ಔಷಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಉತ್ತರ ಕನ್ನಡ ಮೂಲದ ರಾಮನಂದನ ಹೆಗಡೆ ದೊಡ್ಮನೆ ಅವರಿಗೆ ನಮ್ಮನೆ ಸಾಧಕ ಪ್ರಶಸ್ತಿ, ಕಿಶೋರ ಪುರಸ್ಕಾರವನ್ನು ಬಹುಮುಖ ಪ್ರತಿಭೆಯ ವಿದ್ಯಾರ್ಥಿ ತೇಜಸ್ವಿ ಗಾಂವಕರಗೆ ನೀಡಲಾಗುತ್ತಿದೆ.
ರಂಗಭೂಮಿಗೊಬ್ಬರೇ ಜಯಶ್ರೀ!
ಕನ್ನಡ ನಾಡಿನ ಅಗ್ರಮಾನ್ಯ ಕಲಾವಿದೆ ಬಿ ಜಯಶ್ರೀ ಅವರು ಭಾರತೀಯ ರಂಗಭೂಮಿಯ ಪ್ರಸಿದ್ಧ ನಟಿ, ನಿರ್ದೇಶಕಿ ಹಾಗೂ ಗಾಯಕಿ. ರಂಗಭೂಮಿ ಜೊತೆಗೆ ಚಲನಚಿತ್ರ, ಕಿರುತೆರೆಗಳಲ್ಲಿಯೂ ಅವರು ಅಭಿನಯಿಸಿದ್ದರೆ. ಡಬ್ಬಿಂಗ್ ಕಲಾವಿದೆಯಾಗಿ ಹಲವಾರು ಚಿತ್ರಗಳಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಅವರು ಹಾಡಿದ ಹಲವು ಹಾಡುಗಳೇ ಸಿನೆಮಾಗಳನ್ನು ಪ್ರಸಿದ್ಧಗೊಳಿಸಿದ್ದಿವೆ. ಗುಬ್ಬಿ ವೀರಣ್ಣ ಅವರ ಮೊಮ್ಮಗಳಾದ ಜಯಶ್ರೀ ಅವರು ಚಿಕ್ಕಂದಿನಿ0ದಲೇ ರಂಗಭೂಮಿಯ ನಂಟು ಬೆಳಸಿಕೊಂಡು ದೇಶದ ಗಮನ ಸೆಳೆದಿದ್ದಾರೆ.
ಹವ್ಯಾಸಿ ನಾಟಕ ಸಂಸ್ಥೆಯಾಗಿರುವ ಸ್ಪಂದನ ಥಿಯೇಟರ್ ನ ಸೃಜನಶೀಲ ನಿರ್ದೇಶಕರಾಗಿ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. 2010 ರಿಂದ 2016 ರವರೆಗೆ ಅವರು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. 75ರ ವಯಸ್ಸಿನಲ್ಲೂ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿದ್ದು, ಯುವ ಸಮುದಾಯವನ್ನು ಕಲಾ ಮಂದಿರಕ್ಕೆ ಸೆಳೆಯುವ ಕಾಯಕ ಮಾಡುತ್ತಿದ್ದಾರೆ.
ಜೀವದಾಯಿನಿ ಔಷಧ ಕೊಟ್ಟು ಜೀವ ಉಳಿಸಿದವರು
ಮೂಲತಃ ಸಿದ್ದಾಪುರ ತಾಲ್ಲೂಕಿನ ದೊಡ್ಮನೆ ಮೂಲದ ರಾಮನಂದನ ಹೆಗಡೆ ಅವರು ಜಗತ್ತೇ ಕೋವಿಡ್ ಸಂಕಷ್ಟದಲ್ಲಿದ್ದಾಗ ಜೀವದ ಹಂಗು ತೊರೆದು ಲಸಿಕೆಗಳಿಗೆ ಅಗತ್ಯವಾದ ಮೂಲಭೂತ ವಸ್ತುಗಳನ್ನು ಪೂರೈಸಿದವರು. ಆ ಮೂಲಕ ಪ್ರಪಂಚದ ಸಂಕಷ್ಟವನ್ನು ದೂರಮಾಡಲು ಹೆಗಲುಕೊಟ್ಟಿದ್ದಾರೆ. ಆ ಕಾಲದಲ್ಲೇ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ರಸಾಯನಶಾಸ್ತ್ರದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದು, 1978ರಲ್ಲಿ ನಂದು ಕೆಮಿಕಲ್ ಇಂಡಸ್ಟ್ರೀಸ್ ಸ್ಥಾಪಿಸಿ ಅನೇಕರಿಗೆ ಉದ್ಯೋಗದಾತರೂ ಆಗಿದ್ದಾರೆ.
ಔಷಧೋದ್ಯಮ ಕ್ಷೇತ್ರದ ಮೂಲಕ ಮಾನವನ ಕಲ್ಯಾಣಕ್ಕೆ ಜೀವ ರಕ್ಷಣಾ ಸಂಯೋಗಗಳನ್ನು ತಯಾರಿಸಿ, ಮನೆ ಹೊರಗೆ ಬರಲೂ ಹೆದರುವ ಕಾಲದಲ್ಲಿ ಜನರಿಗೆ ಲಸಿಕೆಯ ಅಭಯ ನೀಡುವಲ್ಲಿ ಇವರ ಹಾಗೂ ಇವರ ಸಂಸ್ಥೆಯ ಕೊಡುಗೆ ತೆರೆಯ ಹಿಂದೆಯೂ ಅಪಾರವಾಗಿದೆ. ಸಲಾಯನ್ (ಐವೀ) ದ್ರಾವಣಗಳು, ಡಯಾಲಿಸಿಸ್, ಲಸಿಕೆಗಳು, ಎಲೆಕ್ಟ್ರೋಲೈಟ್ಸ್, ಪೋಷಕಾಂಶ ಪೂರಕಗಳು ಹಾಗೂ ವೈಯಕ್ತಿಕ ಆರೈಕೆಗೆ ಬಳಸುವ ಅನೇಕ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.
45 ವರ್ಷಗಳ ಅನುಭವದೊಂದಿಗೆ ವಿಶ್ವಪ್ರಸಿದ್ಧ ಸಕ್ರೀಯ ಔಷಧ ಪದಾರ್ಥ ತಯಾರಿಕಾ ಸಂಸ್ಥೆಯಾಗಿ ಕಂಪನಿಯನ್ನು ಬೆಳೆಸಿದ್ದಾರೆ. ನಂದು ಕೆಮಿಕಲ್ಸ್ ಮೂಲಕ ವಿಶ್ವದ 20ಕ್ಕೂ ಹೆಚ್ಚು ದೇಶಗಳಿಗೆ ಔಷಧ ಮತ್ತು ಅದರ ಉತ್ಪನ್ನ, ಪರಿಕರಗಳನ್ನು ರಫ್ತು ಮಾಡುತ್ತಿದ್ದಾರೆ. ಭಾರತದಲ್ಲಿ ತಯಾರಾಗುವ 10 ಐವೀ ಬಾಟಲಿಗಳಲ್ಲಿ 8 ಬಾಟಲಿಗಳಲ್ಲಿ ನಂದು ಕಂಪನಿಯ ಉತ್ಪನ್ನಗಳೇ ಸೇರಿವೆ ಎಂಬುದು ವಿಶೇಷ. ಇನ್ನು ಇವರ ಸಾಧನೆಗೆ ಐದು ಬಾರಿ ರಫ್ತು ಪ್ರಶಸ್ತಿ, ಗ್ರಾಹಕರಿಂದ ಉತ್ತಮ ಪೂರೈಕೆದಾರ ಪ್ರಶಸ್ತಿ ಹಾಗೂ ಕೋವಿಶೀಲ್ಡ್ ಲಸಿಕೆಗೆ ಮುಖ್ಯ ಸಂಯೋಗ ಒದಗಿಸಿದಕ್ಕಾಗಿ ವಿಶೇಷ ಗೌರವ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಿAದ ವಾಣಿಜ್ಯ ರತ್ನ ಪ್ರಶಸ್ತಿ, 2024ರಲ್ಲಿ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಸ್ಪೂರ್ತಿ ರತ್ನ ಪ್ರಶಸ್ತಿ ಪಡೆದಿದ್ದಾರೆ. ಅನೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳ ಜೊತೆಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಕಿಶೋರ ಪುರಸ್ಕಾರ
ಚಿಕ್ಕಂದಿನಿoದಲೇ ಯಕ್ಷಗಾನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿರುವ ಬಹುಮುಖ ಪ್ರತಿಭೆಯುಳ್ಳ ಅಂಕೋಲಾ ತಾಲೂಕಿನ ತೇಜಸ್ವಿ ರಾಮಕೃಷ್ಣ ಗಾಂವಕರ ಹೆಗ್ಗಾರು ಅವರಿಗೆ ಇದೇ ವೇದಿಕೆಯಲ್ಲಿ ಕಿಶೋರ ಪುರಸ್ಕಾರ ನೀಡಲಾಗುತ್ತಿದೆ. ತೇಜಸ್ವಿ ಗಾಂವ್ಕರ ಅವರು ಎಳೆಯ ವಯಸ್ಸಿನಲ್ಲೇ `ಯಕ್ಷತೇಜ’ ಕವನ ಸಂಕಲನ ಮತ್ತು `ಹೃದಯದ ಮಾತು ಕೇಳು ನನ್ನ ಒಲವೇ’ ಕಾದಂಬರಿಯನ್ನು ಪ್ರಕಟಿಸಿದ್ದಾರೆ. ರಾಜ್ಯಮಟ್ಟದ ಅನೇಕ ಕವಿಗೋಷ್ಠಿಗಳು ಮತ್ತು ಸಾಹಿತ್ಯ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಕೀರ್ತನಾಚತುರನಾಗಿಯೂ ಅವರು ಗಮನ ಸೆಳೆದಿದ್ದಾರೆ. `ನೈಜ ಸಾಧಕರಿಗೇ ಪ್ರಶಸ್ತಿ ಸಿಗಬೇಕು ಹಾಗೂ ಬೆಳೆವ ಸಿರಿ ಬೆಂಬಲಿಸಬೇಕು ಎಂಬ ಕಾರಣಕ್ಕೆ ಯಾರಿಂದಲೂ ಯಾವುದೇ ಅರ್ಜಿ ಪಡೆಯದೇ ಆಯ್ಕೆ ಸಮಿತಿಯು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ’ ಎಂದು ವಿಶ್ವಶಾಂತಿ ಸೇವಾ ಟ್ರಸ್ಟ್’ನ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಅವರು ಹೇಳಿದ್ದಾರೆ.