ಶಿರಸಿ ಶೈಕ್ಷಣಿಕ ಜಿಲ್ಲೆಯ ಅನುದಾನಿತ ಶಾಲಾ ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕಾಗಿ ಪಿಂಚಣಿ ವಂಚಿತ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಜಿ ಹನುಮಂತಪ್ಪ ಅವರು ಜಿಲ್ಲೆಗೆ ಬರುತ್ತಿದ್ದಾರೆ. ಅಕ್ಟೊಬರ್ 6ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಅವರು ಯಲ್ಲಾಪುರದಲ್ಲಿ ಶಿಕ್ಷಕರ ಸಭೆ ನಡೆಸಲಿದ್ದಾರೆ.
ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯ ಸಭಾ ಭವನದಲ್ಲಿ ಅನುದಾನಿತ ನೌಕರರ ಹಕ್ಕುಗಳು ಹಾಗೂ ಸಂಘದ ಬಲವರ್ಧನೆಗಾಗಿ ಈ ಸಭೆ ಆಯೋಜಿಸಲಾಗಿದೆ. ಅನುದಾನಿತ ಶಾಲೆಗಳಲ್ಲಿ ದುಡಿಯುವ ಶಿಕ್ಷಕರು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಪಿಂಚಣಿ ವಿಷಯವಾಗಿ ಅವರೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಿದ್ದು, ಈ ವಿಷಯವಾಗಿ ನ್ಯಾಯಾಲಯದಲ್ಲಿ ಸಹ ಪ್ರಕರಣ ನಡೆಯುತ್ತಿದೆ. ಅಕ್ಟೋಬರ್ 17ರಂದು ನ್ಯಾಯಾಲಯದ ಆದೇಶ ಹೊರಬರುವ ಸಾಧ್ಯತೆ ಹಿನ್ನಲೆ ಯಲ್ಲಾಪುರದಲ್ಲಿ ಸಭೆ ಕರೆಯಲಾಗಿದೆ.
ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಹೋರಾಟ, ನ್ಯಾಯಾಲಯದ ಆದೇಶದ ನಂತರ ಮಾಡಬೇಕಾದ ಕೆಲಸ, ಪಿಂಚಣಿ ವಿಷಯವಾಗಿ ಸರ್ಕಾರದ ಮಟ್ಟದಲ್ಲಿ ನಡೆದ ಬೆಳವಣಿಗೆ, ನಿವೃತ್ತಿ ಅಂಚಿನಲ್ಲಿರುವ ನೌಕರರ ಪರಿಸ್ಥಿತಿ ಹಾಗೂ ನಿವೃತ್ತಿ ಆಗಿರುವ ಶಿಕ್ಷಕರ ಆಗು-ಹೋಗುಗಳ ಮೇಲೆ ಈ ಸಭೆ ಬೆಳಕು ಚೆಲ್ಲಲಿದೆ. ಶಾಲೆಯಲ್ಲಿ ಮಕ್ಕಳ ದಾಖಲಾತಿ ಕೊರತೆ ಹಾಗೂ ಕಡಿಮೆ ಫಲಿತಾಂಶದ ನೆಪದಿಂದ ಶಿಕ್ಷಕರ ಸಂಬಳಕ್ಕೆ ಕತ್ತರಿ ಬಿದ್ದಿರುವ ವಿಷಯದ ಬಗ್ಗೆಯೂ ಚರ್ಚಿಸಲಾಗುತ್ತದೆ. ಇದರೊಂದಿಗೆ ಜ್ಯೋತಿ ಸಂಜೀವಿನಿ ಆರೋಗ್ಯ ಸೌಲಭ್ಯದ ಬಗ್ಗೆಯೂ ಸಭೆಯಲ್ಲಿ ಮಾಹಿತಿ ನೀಡಲಾಗುತ್ತದೆ.
ಸಂಘಟನೆಯ ಕಾನೂನು ಹೋರಾಟ ಸಮಿತಿಯ ನಾಗರಾಜಪ್ಪ ಬುಕ್ಕಾಂಬುದಿ, ರಾಜ್ಯ ಸಂಚಾಲಕ ಜಾಲಮಂಗಲ ನಾಗರಾಜ್ ಸಹ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಶಿರಸಿಯ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಡಿಪ್ಲೊಮೊ, ಐಟಿಐ, ಬಿಇಡಿ, ಇಂಜಿನಿಯರಿoಗ್ ಕಾಲೇಜುಗಳ ಸಿಬ್ಬಂದಿಗಾಗಿ ಈ ಸಭೆ ಆಯೋಜಿಸಲಾಗಿದೆ. ಭಾಗವಹಿಸುವವರಿಗೆ ಇನ್ನೂ ಏನಾದರೂ ಗೊಂದಲವಿದ್ದರೆ ಇಲ್ಲಿ ಫೋನ್ ಮಾಡಿ: 9980959108 ಅಥವಾ 9449787901