ಯಲ್ಲಾಪುರದ ಯುವಕರಿಬ್ಬರು ಅಮಲಿನಲ್ಲಿರುವಾಗ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಮಲಿನಲ್ಲಿದ್ದ ಅವರಿಬ್ಬರು ಸರಿಯಾಗಿ ಮಾತನಾಡದ ಕಾರಣ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಆ ವೇಳೆ ಅವರು ಗಾಂಜಾ ನಶೆಯಲ್ಲಿರುವುದು ದೃಢವಾಗಿದೆ.
ಯಲ್ಲಾಪುರದ ವಿನಾಯಕ ನಗರದಲ್ಲಿರುವ ಅಂಗನವಾಡಿ ಬಳಿ ಅದೇ ಭಾಗದ ಕಾರ್ ಮೆಕಾನಿಕ್ ರಾಜೇಶ ರತ್ನಾಕರ ಆಚಾರಿ ಅಲೆದಾಡುತ್ತಿದ್ದರು. ಅವರ ಜೊತೆ ವಿನಾಯಕ ನಗರದ ದರ್ಶನ್ ವೆಂಕಟೇಶ ಆಚಾರಿ ಸಹ ಇದ್ದರು. ಅಕ್ಟೊಬರ್ 2ರಂದು ಪಿಎಸ್‌ಐ ರಾಜಶೇಖರ ವಂದಲಿ ಅವರು ಇಬ್ಬರನ್ನು ಮಾತನಾಡಿಸಿದರು. ಆದರೆ, ಅವರಿಬ್ಬರು ಆ ಕ್ಷಣದಲ್ಲಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ.
ಹೀಗಾಗಿ ಪೊಲೀಸರು ಅವರಿಬ್ಬರನ್ನು ಆಸ್ಪತ್ರೆಗೆ ಕರೆದೊಯ್ದರು. ನಶೆಯಲ್ಲಿದ್ದ ರಾಜೇಶ ರತ್ನಾಕರ ಆಚಾರಿ ಹಾಗೂ ದರ್ಶನ್ ವೆಂಕಟೇಶ ಆಚಾರಿ ಇಬ್ಬರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ತಪಾಸಣಾ ವರದಿಯಲ್ಲಿ ಅವರಿಬ್ಬರು ಗಾಂಜಾ ಸೇವಿಸಿದ ಬಗ್ಗೆ ಪಾಸಿಟಿವ್ ವರದಿ ಬಂದಿತು. ಹೀಗಾಗಿ ಪೊಲೀಸರು ಕಾನೂನಿನ ಪ್ರಕಾರ ಪ್ರಕರಣ ದಾಖಲಿಸಿದರು. ಸದ್ಯ ಸಹಾಯಕ ಪೊಲೀಸ್ ಉಪನಿರೀಕ್ಷಕಿ ರೇಣುಕಾ ಬೆಳಗಟ್ಟಿ ಅವರು ಈ ಪ್ರಕರಣದ ತನಿಖೆ ಶುರು ಮಾಡಿದ್ದಾರೆ.