ಕುಮಟಾದ ಉಪ್ಪಾರಕೇರಿಯಲ್ಲಿ ವಾಸವಾಗಿರುವ 72ವರ್ಷದ ರಾಧಾ ಆಚಾರಿ ಅವರು ಆದಾಯ ಪ್ರಮಾಣ ಪತ್ರಕ್ಕಾಗಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರ ಆದಾಯ ಮಿತಿ ಹೆಚ್ಚಾಗಿರುವ ಕಾರಣ ಪ್ರಮಾಣ ಪತ್ರ ಸಿಕ್ಕಿಲ್ಲ. ಹೀಗಾಗಿ ವೃದ್ಧೆಗೆ ಅನ್ಯಾಯವಾಗಿದೆ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ದೂರಿದ್ದಾರೆ.
`ರಾಧಾ ಆಚಾರಿ ಅವರ ಮಕ್ಕಳಿಗೆ ಮದುವೆಯಾಗಿದೆ. ಮಗ ಪ್ರತ್ಯೇಕವಾಗಿ ವಾಸವಾಗಿದ್ದು, 80 ವರ್ಷದ ಗಂಡನ ಆರೈಕೆಯಲ್ಲಿ ರಾಧಾ ಆಚಾರಿ ಅವರಿದ್ದಾರೆ. ಸರ್ಕಾರದಿಂದ ಸಿಗುವ ಪಡಿತರ ಅಕ್ಕಿ ಹಾಗೂ ಗೃಹಲಕ್ಷ್ಮಿ ಹಣವೇ ಈ ಕುಟುಂಬಕ್ಕೆ ಆಧಾರವಾಗಿದೆ. ವಯೋಸಹಜ ರೋಗದಿಂದ ಬಳಲುತ್ತಿರುವ ಅವರ ಕುಟುಂಬಕ್ಕೆ ಸಂದ್ಯಾ ಸುರಕ್ಷಾ ಯೋಜನೆ ಅಡಿ ಅರ್ಜಿ ಹಾಕಲು ಆದಾಯ ಪ್ರಮಾಣ ಪತ್ರ ಅಗತ್ಯವಿದ್ದು, ಅದು ಸಿಗುತ್ತಿಲ್ಲ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರು ದೂರಿದ್ದಾರೆ.
`ಸಂದ್ಯಾ ಸುರಕ್ಷಾ ಯೋಜನೆ ಅಡಿ ರಾಧಾ ಆಚಾರಿ ಅವರಿಗೆ 1200ರೂ ಸಿಕ್ಕರೆ ಅದು ಅವರ ಕುಟುಂಬಕ್ಕೆ ಆಧಾರವಾಗುತ್ತಿತ್ತು. ಆದರೆ, ಅಧಿಕಾರಿಗಳು ಲಂಚಕ್ಕಾಗಿ ಅವರಿಗೆ ಅನ್ಯಾಯ ಮಾಡಿದ್ದಾರೆ. ಹಿರಿಯ ನಾಗರಿಕರಿಗೆ ಟಾಸ್ಕ್ ಫೋರ್ಸ್ ಸಮಿತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿದ್ದು, ಅಧಿಕಾರಿಗಳ ವಿರುದ್ಧ ಅವರಿಗೆ ದೂರು ನೀಡಲಾಗಿದೆ’ ಎಂದು ಆಗ್ನೇಲ್ ರೋಡ್ರಿಗಸ್ ವಿವರಿಸಿದ್ದಾರೆ.
`ಈ ಮೊದಲು ಪಿಂಚಣಿ ವಂಚಿತರಾದವರ ಬಗ್ಗೆ ಸಹ ಜಿಲ್ಲಾಧಿಕಾರಿ ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ಅದಾದ ನಂತರ ಅವರ ಸಮಸ್ಯೆ ಬಗೆಹರಿದಿತ್ತು’ ಎಂಬ ವಿಷಯದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಅವರು ಗಮನಸೆಳೆದಿದ್ದಾರೆ.