ತಾಳಮದ್ದಲೆ, ಯಕ್ಷಗಾನ, ಭರತನಾಟ್ಯ ಸೇರಿ ಬಗೆ ಬಗೆಯ ಮನರಂಜನಾ ಕಾರ್ಯಕ್ರಮಗಳ ಜೊತೆ ಈ ಬಾರಿಯ ಸಂಕಲ್ಪ ಉತ್ಸವ ಐದು ಸ್ವಾಮೀಜಿಯವರ ಸಾನಿಧ್ಯಕ್ಕೆ ಸಾಕ್ಷಿಯಾಗಲಿದೆ.
ಸಂಕಲ್ಪ ಉತ್ಸವದ ಮೊದಲ ದಿನವಾದ ಅಕ್ಟೋಬರ್ 31ರಂದು ಸಂಜೆ 5.30ಕ್ಕೆ ಸ್ವರ್ಣವಲ್ಲೀ ಶ್ರೀಗಳು ಉತ್ಸವದ ವೇದಿಕೆಗೆ ಬರಲಿದ್ದಾರೆ. ಅವರ ಜೊತೆ ಎಡನೀರು ಶ್ರೀಗಳು ಸೇರಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. 5 ದಿನದ ಉತ್ಸವದಲ್ಲಿ ಶಿರಳಗಿ ಬ್ರಹ್ಮಾನಂದ ಭಾರತಿ ಶ್ರೀಗಳು, ಬಾರ್ಕೂರು ಶ್ರೀಗಳು, ನೆಲೆಮಾವು ಶ್ರೀಗಳು ಹಾಗೂ ರಾಘವೇಶ್ವರ ಭಾರತೀ ಸ್ವಾಮೀಜಿ ಭಾಗವಹಿಸಲಿದ್ದಾರೆ.
ಯಲ್ಲಾಪುರದ ಸಂಕಲ್ಪ ಸೇವಾ ಸಂಸ್ಥೆ ಕಳೆದ 38 ವರ್ಷಗಳಿಂದ `ಸಂಕಲ್ಪ ಉತ್ಸವ’ ನಡೆಸುತ್ತಿದೆ. 39ನೇ ವರ್ಷದ ಉತ್ಸವ ಅಕ್ಟೊಬರ್ 31ರಿಂದ ನವೆಂಬರ್ 4ವರೆಗೆ ಪಟ್ಟಣದ ಗಾಂಧಿ ಕುಟೀರದಲ್ಲಿ ನಡೆಯಲಿದೆ. `ರಾಜ್ಯದಲ್ಲಿಯೇ ನಿರಂತರವಾಗಿ ಸಾಂಸ್ಕೃತಿಕ ತೇರನ್ನೆಳೆಯುತ್ತಿರುವ ಕೆಲವೇ ಸಂಸ್ಥೆಗಳಲ್ಲಿ ಸಂಕಲ್ಪವೂ ಒಂದಾಗಿದೆ. ಕನ್ನಡ ಜೀವನ ಹಬ್ಬ ಸಂಸ್ಕೃತಿಯ ಸುಗ್ಗಿ ಇದಾಗಿದ್ದು, ನಾಡಿನ ನೂರಾರು ಕಲಾವಿದರನ್ನು ಬೆಳೆಸಿದ ಹೆಗ್ಗಳಿಕೆ ಹೊಂದಿದೆ’ ಎಂದು ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದ್ದಾರೆ.
`ಯಕ್ಷಗಾನ, ತಾಳಮದ್ದಲೆ, ಭರತನಾಟ್ಯ, ಕೀರ್ತನೆ, ಸಂಗೀತ, ನಾಟಕ, ಗಮಕ ವಾಚನ, ಭಜನೆ ನಡೆಯಲಿದೆ. ಪುಸ್ತಕ ಬಿಡುಗಡೆ, ರಾಷ್ಟ್ರಭಕ್ತಿ ಕಾರ್ಯಕ್ರಮ, ನಿವೃತ್ತ ಸೈನಿಕರಿಗೆ, ಸಾಧಕರಿಗೆ ಸನ್ಮಾನ, ಪುರಾಣ ಲಹರಿ ಕಾರ್ಯಕ್ರಮ ನಡೆಯಲಿದೆ. ಗೋ ಉತ್ಪನ್ನ ಮಳಿಗೆ, ಆಯುರ್ವೇದ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ತಮ್ಮ ಪುತ್ರರಾದ ಪ್ರಶಾಂತ ಹೆಗಡೆ ಹಾಗೂ ಪ್ರಸಾದ ಹೆಗಡೆ ಸೇರಿ ಈ ಎಲ್ಲಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ’ ಎಂದು ವಿವರಿಸಿದರು.
ಸಂಕಲ್ಪ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ಮಾತನಾಡಿ `ಈ ಬಾರಿ ವಿವಿಧ ಕ್ಷೇತ್ರಗಳ ಸಾಧಕರಾದ ಬಿ ಎನ್ ವಾಸರೆ, ರಾಮನಾಥ ಭಟ್ಟ, ಯಮುನಾ ನಾಯ್ಕ, ಕಲ್ಲಪ್ಪ ನಾಯ್ಕ, ನರಸಿಂಹ ಸಾತೊಡ್ಡಿ, ಸುಬ್ರಾಯ ಬಿದ್ರೆಮನೆ, ಚಿದಾನಂದ ಹರಿಜನ, ಡಾ ನಾರಾಯಣ ಹುಳ್ಸೆ ಅವರಿಗೆ ಸಂಕಲ್ಪ ಪ್ರಶಸ್ತಿ ನೀಡಿ ಗೌರವಿಸಲಾಗತ್ತದೆ’ ಎಂದರು. ಸಂಸ್ಥೆಯ ಸದಸ್ಯ ಸಿ ಜಿ ಹೆಗಡೆ ಮಾತನಾಡಿ `ಪ್ರತಿ ದಿನ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ನೇತೃತ್ವದಲ್ಲಿ ಪ್ರಸಿದ್ಧ ಕಲಾವಿದರಿಂದ ಬಬ್ರುವಾಹನ, ಗದಾಯುದ್ಧ, ಕಾಳಿದಾಸ, ದ್ರೌಪದಿ ಪ್ರತಾಪ, ಪಾಂಚಜನ್ಯ ಯಕ್ಷಗಾನ ಪ್ರದರ್ಶನ ನಡೆಯಲಿದೆ’ ಎಂಬ ಮಾಹಿತಿ ತಿಳಿಸಿದರು. ಸಂಸ್ಥೆಯ ಸದಸ್ಯ ಬಾಬು ಬಾಂದೇಕರ್ ಇದ್ದರು.