ರಾಜಕೀಯ ಕಾರಣದಿಂದ ಕಚ್ಚಾಟದಲ್ಲಿ ತೊಡಗಿರುವ ನಾಯಕರು ಈ ದಿನ `ಉತ್ತರ ಕನ್ನಡ ಉಳಿಸಿ’ ಅಭಿಯಾನದ ಅಂಗವಾಗಿ ಒಂದಾಗಿದ್ದಾರೆ. ಜಿಲ್ಲೆಯ ಮಾರಕ ಯೋಜನೆಗಳ ವಿರುದ್ಧ ಶಾಸಕ-ಸಂಸದರು ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರಕ್ಕೆ ಮಾರಕವಾದ ಯೋಜನೆಗಳನ್ನು ಜಾರಿಗೆ ತರಬಾರದು’ ಎಂದು ಅವರೆಲ್ಲರೂ ಮನವಿ ಮಾಡಿದ್ದಾರೆ. ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರ ಜೊತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೈ ಜೋಡಿಸಿದ್ದು, ಶಾಸಕರಾದ ಶಿವರಾಮ್ ಹೆಬ್ಬಾರ್, ಶಾಂತರಾಮ್ ಸಿದ್ಧಿ ಸಹ ವಿವಿಧ ಯೋಜನೆಗಳಿಗೆ ವಿರೋಧವ್ಯಕ್ತಪಡಿಸಿದರು. ಅಘನಾಶಿನಿ ಕೊಳ್ಳ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶಿಸರ, ಸ್ವರ್ಣವಲ್ಲಿ ಮಠದ ಅಧ್ಯಕ್ಷ ವಿ ಎನ್ ಹೆಗಡೆ ಅವರು ವಿವಿಧ ಯೋಜನೆಗಳಿಂದ ಆಗುವ ಹಾನಿ ವಿವರಿಸಿದರು. ಈ ಎಲ್ಲರೂ ಸೇರಿ ಪರಿಸರ ಮತ್ತು ಜನಜೀವನಕ್ಕೆ ತೀವ್ರ ಆತಂಕವನ್ನು ಸೃಷ್ಟಿಸಿರುವ ಬೇಡ್ತಿ-ವರದಾ, ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆ ವಿರೋಧಿಸಿದರು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ನಿಲ್ಲಿಸುವಂತೆ ಒತ್ತಾಯಿಸಿದರು.
`ಈ ಯೋಜನೆಗಳ ಕುರಿತು ವಿಜ್ಞಾನಿಗಳ ಸಭೆ ನಡೆಸಬೇಕು. ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನವನ್ನು ನಡೆಸಬೇಕು’ ಎಂದು ಆಗ್ರಹಿಸಿದರು. `ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಇದರಿಂದ ರೈತ ಸಮುದಾಯ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗಾಗಿ ಬೆಳೆ ನಷ್ಟ ಪರಿಹಾರದ ಹಣವನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒತ್ತಾಯಿಸಿದರು.
`ಹವಾಮಾನ ಆಧಾರಿತ ಬೆಳೆ ವಿಮೆಯು ಸಕಾಲದಲ್ಲಿ ದೊರಕುವಂತೆ ಕ್ರಮ ಕೈಗೊಳ್ಳಬೇಕು. ಹವಾಮಾನ ಮಾಪನ ಯಂತ್ರಗಳನ್ನು ತುರ್ತಾಗಿ ದುರಸ್ತಿಗೊಳಿಸಿ, ವಿಮಾ ಪರಿಹಾರ ಸಕಾಲದಲ್ಲಿ ದೊರಕಲು ಅಗತ್ಯ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು. `ಜಿಲ್ಲೆಯಲ್ಲಿ ರಸ್ತೆಗಳ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಸಾರ್ವಜನಿಕ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಜನರ ಹಿತದೃಷ್ಟಿಯಿಂದ, ಈ ಹಾನಿಗೊಳಗಾದ ರಸ್ತೆಗಳ ದುರಸ್ತಿಗಾಗಿ ತಕ್ಷಣವೇ ಅಗತ್ಯ ಹಣವನ್ನು ಬಿಡುಗಡೆಗೊಳಿಸಿ’ ಎಂದು ಒತ್ತಾಯಿಸಿದರು.