ರಾಜ್ಯದ ಎಲ್ಲಡೆ `ಮನೆ ಮನೆಗೂ ಪೊಲೀಸ್’ ಅಭಿಯಾನ ನಡೆಯುತ್ತಿದೆ. ಅದಕ್ಕೆ ವಿರುದ್ಧ ಎಂಬoತೆ ಶಿರಸಿಯಲ್ಲಿ ಗಲ್ಲಿ ಗಲ್ಲಿಯೂ ಕಳ್ಳರ ಕಾಟ ಜೋರಾಗಿದೆ. ಕಳ್ಳರ ಕಾಟದಿಂದ ತಪ್ಪಿಸಿಕೊಳ್ಳುವುದು ಒಂಟಿ ಮನೆ ಮಾಲಕರಿಗೆ ದೊಡ್ಡ ಸವಾಲಾಗಿದೆ.
ಕಳೆದ ಕೆಲ ದಿನಗಳಿಂದ ಶಿರಸಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದೆ. ಮನೆಯ ಬೀಗ ಒಡೆದು ಒಳ ನುಗ್ಗುವ ಕಳ್ಳರು ಜೋಪಾನವಾಗಿರಿಸಿಕೊಂಡಿದ್ದ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಾರೆ. ಕಳೆದ ಎರಡು ದಿನದಲ್ಲಿ ಮೂರು ಕಡೆ ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ.
ಮಾರಿಕಾಂಬಾ ನಗರದ ಹಾಲೊಂಡ ಬಳಿಯ ಉದ್ಯಮಿ ಉದಯ ನಾಯ್ಕ ಅವರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ಮನೆ ಬಾಗಿಲು ಮುರಿದು ಹಣ ಬಂಗಾರ ಕದ್ದು ಪರಾರಿಯಾಗಿದ್ದಾರೆ. ಲಯನ್ಸ ನಗರದ ಗುತ್ತಿಗೆದಾರ ವೆಂಕಟೇಶ ಆನಂದ ಕಡಿಮನೆ ಅವರ ಮನೆಗೂ ಕಳ್ಳರು ಆಗಮಿಸಿದ್ದು, ಅಲ್ಲಿಯೂ ಬೆಲೆ ಬಾಳುವ ಬಂಗಾರದ ಒಡವೆಗಳನ್ನು ದೋಚಿದ್ದಾರೆ. ಮಾರಿಕಾಂಬಾ ನಗರದ ಶಿಕ್ಷಕಿ ರಮಾ ಗೋವಿಂದ ನಾಯ್ಕ ಅವರು ಸಹ ಕಳ್ಳರ ಕಾಟಕ್ಕೆ ಬೇಸತ್ತು ಪೊಲೀಸರ ನೆರವು ಯಾಚಿಸಿದ್ದಾರೆ.
ಶಿಕ್ಷಕಿ ರಮಾ ನಾಯ್ಕ ಅವರು ಅಕ್ಟೊಬರ್ 2ರಂದು ಸಿದ್ದಾಪುರದ ಮನಮನೆಗೆ ಹೊಗಿದ್ದರು. ಅಲ್ಲಿ ಅವರ ರೆಸಾರ್ಟ ಇದ್ದು, ಅಲ್ಲಿ ಹೋಗಿ ಬರುವುದರೊಳಗೆ ಕಳ್ಳರು ಅವರ ಮನೆಗೆ ನುಗ್ಗಿ ಹೊರ ಬಿದ್ದಿದ್ದರು. ಅಕ್ಟೊಬರ್ 5ರಂದು ಅವರು ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಅರಿವಿಗೆ ಬಂದಿತು. ಮನೆಯ ಬಾಗಿಲು ಭದ್ರಪಡಿಸಿದ್ದರೂ ಕಳ್ಳರು ಅದನ್ನು ಮುರಿದು ಒಳಗೆ ನುಗ್ಗಿದ್ದರು. ರಮಾ ನಾಯ್ಕ ಅವರ ಬೆಡ್ ರೂಮಿನಲ್ಲಿದ್ದ 48 ಸಾವಿರ ರೂ ಹಣ, 7 ಲಕ್ಷ ರೂ ಮೌಲ್ಯದ ಬಂಗಾರದ ಆಭರಣವನ್ನು ಕಳ್ಳರು ದೋಚಿದ್ದರು. ಜೊತೆಗೆ 50 ಸಾವಿರ ರೂ ಮೌಲ್ಯದ ಬೆಳ್ಳಿಯ ತಾಟುಗಳನ್ನು ಅವರು ಒಯ್ದಿದ್ದರು.
ಲಯನ್ಸ ನಗರದ 4ನೇ ಕ್ರಾಸಿನಲ್ಲಿರುವ ಸಿವಿಲ್ ಗುತ್ತಿಗೆದಾರ ವೆಂಕಟೇಶ ಕಡೆಮನೆ ಅವರಿಗೂ ಕಳ್ಳರು ಸಾಕಷ್ಟು ಕಾಟ ಕೊಟ್ಟಿದ್ದು, ಅವರು ವೈಕುಂಠ ಸಮಾರಾಧನೆಗೆ ಹೋಗಿ ಬರುವಷ್ಟರಲ್ಲಿ ಇಡೀ ಮನೆ ದೋಚಿದ್ದರು. ಅಕ್ಟೊಬರ್ 4ರಂದು ವೆಂಕಟೇಶ ಕಡೆಮನೆ ಅವರು ಮನೆಗೆ ಬೀಗ ಹಾಕಿ ಕುಮಟಾಗೆ ಹೋಗಿದ್ದರು. ಅಲ್ಲಿನ ಬೋಗ್ರಿಬೈಲಿನಲ್ಲಿ ಪತ್ನಿ ತಂದೆಯ ವೈಕುಂಠ ಸಮಾರಾಧನೆಯಲ್ಲಿ ಭಾಗವಹಿಸಿದ್ದರು. ಅಕ್ಟೊಬರ್ 5ರಂದು ಮರಳಿ ಬಂದಾಗ ಮನೆ ಬಾಗಿಲು ಚೌಕಟ್ಟು ವಿಕಾರವಾಗಿತ್ತು.
ಕಳ್ಳರು ಅವರ ಮನೆಯೊಳಗೆ ನುಗ್ಗಿ ಬೆಡ್ ರೂಮಿನಲ್ಲಿದ್ದ ಹಣ ಎಗರಿಸಿದ್ದರು. ಬಟ್ಟೆಗಳನ್ನು ಚಲ್ಲಾಪಿಲ್ಲಿಯಾಗಿಸಿದ್ದರು. 4 ಲಕ್ಷ ರೂ ಹಣ, 3 ಲಕ್ಷದ ಬಂಗಾರದ ಸರ, 2 ಲಕ್ಷದ ಮುತ್ತಿನ ಹಾರ, 1.5 ಲಕ್ಷ ರೂ ಮೌಲ್ಯದ ಉಂಗುರ, 3 ಲಕ್ಷ ರೂ ಮೌಲ್ಯದ ಕಿವಿಯೋಲೆಗಳನ್ನು ಕದ್ದಿದ್ದರು. ಈ ಎಲ್ಲಾ ಕಳ್ಳತನ ಪ್ರಕರಣದಲ್ಲಿಯೂ ಮನೆ ಮಾಲಕರು ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಸಹ ಕಳ್ಳರ ಹುಡುಕಾಟಕ್ಕೆ ನಾನಾ ಪ್ರಯತ್ನ ಮಾಡಿದ್ದಾರೆ.