ಹೊನ್ನಾವರದ ಮಣಿಕಂಠ ನಾಯ್ಕ ಅವರು ನಿತ್ಯವೂ ತಮ್ಮ ತಾಯಿ ಮೀರಾ ನಾಯ್ಕ ಅವರಿಗೆ ಕೋಲಿನಿಂದ ಹೊಡೆಯುತ್ತಾರೆ. ತಂದೆ ಉದಯ ನಾಯ್ಕ ಅವರ ಮೇಲೆಯೂ ಮಣಿಕಂಠ ನಾಯ್ಕ ಅವರು ಕೈ ಮಾಡಿದ್ದಾರೆ.
ಹೊನ್ನಾವರದ ಮಂಕಿ ಬಳಿಯ ಹೊಸಪಟ್ಟಣದ ರಾಮನಗರದಲ್ಲಿ ಉದಯ ನಾಯ್ಕ ಹಾಗೂ ಮೀರಾ ನಾಯ್ಕ ದಂಪತಿ ವಾಸವಾಗಿದ್ದಾರೆ. ಅವರ ಮಗ ಮಣಿಕಂಠ ನಾಯ್ಕ (29) ಅವರು ಕೂಲಿ ಕೆಲಸ ಮಾಡುತ್ತಿದ್ದು, ಆ ದುಡಿಮೆಯೇ ಈ ದಂಪತಿ ಜೀವನಕ್ಕೆ ಆಧಾರ. ಆದರೆ, ಮಣಿಕಂಠ ನಾಯ್ಕ ಅವರು ಈಚೆಗೆ ದುಶ್ಚಟಗಳ ದಾಸರಾಗಿದ್ದಾರೆ. `ಸರಾಯಿ ಸೇವನೆ ಒಳ್ಳೆಯದಲ್ಲ’ ಎಂದು ಹೇಳಿದ ಕಾರಣ ತಂದೆ-ತಾಯಿ ಮೇಲೆ ಕೈ ಮಾಡುವುದನ್ನು ಕಲಿತಿದ್ದಾರೆ.
ಪ್ರತಿ ದಿನ ಕುಡಿದು ಮನೆಗೆ ಬರುವ ಮಣಿಕಂಠ ನಾಯ್ಕ ಅವರು ಕುಟುಂಬದವರಿಗೆ ನೆಮ್ಮದಿಯಿಂದ ನಿದ್ದೆ ಮಾಡಲು ಬಿಡುತ್ತಿಲ್ಲ. ಪಾಲಕರಿಂದಲೂ ಮಗನ ಕಾಟವನ್ನು ಸಹಿಸಲು ಆಗುತ್ತಿಲ್ಲ. ಅಕ್ಟೊಬರ್ 5ರಂದು ಮಧ್ಯಾಹ್ನ ಉದಯ ನಾಯ್ಕ ಅವರು ಊಟ ಮಾಡಿ ಮಲಗಿದ್ದಾಗ ಸರಾಯಿ ಸೇವಿಸಿ ಬಂದ ಮಣಿಕಂಠ ನಾಯ್ಕ ಅವರು ಏಕಾಏಕಿ ಬೈಗುಳ ಶುರು ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಬಡಿಗೆಯಿಂದ ಉದಯ ನಾಯ್ಕ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಜಗಳದ ಬಗ್ಗೆ ವಿಚಾರಿಸಲು ಬಂದ ಮೀರಾ ನಾಯ್ಕ ಅವರ ಮೇಲೆಯೂ ಮಣಿಕಂಠ ನಾಯ್ಕ ಅವರು ಕೈ ಮಾಡಿದ್ದಾರೆ. ಕೋಲಿನಿಂದ ಹೊಡೆದ ಪರಿಣಾಮ ಈ ದಂಪತಿಯ ಮುಖ, ತಲೆಗೆ ಪೆಟ್ಟಾಗಿದೆ. ಮಗನ ಕಾಟ ಸಹಿಸಲಾಗದೇ ಉದಯ ನಾಯ್ಕ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಮಂಕಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.