ಜೊಯಿಡಾದ ತಿನೈಘಾಟ್ ಸೇತುವೆ ಬಳಿ ಮಹಿಳೆಯೊಬ್ಬರ ಶವ ಸಿಕ್ಕಿದೆ. ಶವದ ಬಳಿ ಮೊಬೈಲ್ ಸಹ ದೊರೆತಿದ್ದು, ಅದರಲ್ಲಿ ಅಡಗಿದ್ದ ಮೆಸೆಜ್ ಕೊಲೆಯ ಅನುಮಾನ ಹುಟ್ಟು ಹಾಕಿದೆ.
ಬೆಳಗಾವಿ – ಗೋವಾ ರಾಷ್ಟ್ರೀಯ ಹೆದ್ದಾರಿಯ ತಿನೈಘಾಟ್ ಸೇತುವೆ ಕೆಳಗಿನ ನೀರಿನಲ್ಲಿ ಶನಿವಾರ ರಾತ್ರಿ ಚಾಲಕರೊಬ್ಬರು ಈ ಶವ ನೋಡಿದ್ದಾರೆ. ನಂತರ ಅಲ್ಲಿನ ಜನ ಪೊಲೀಸರಿಗೆ ಮಾಹಿತಿ ನೀಡಿದರು. ನಂದಗಡದ ದುರ್ಗಾನಗರದ ಬಳಿ ವಾಸವಾಗಿದ್ದ ಅಶ್ವಿನಿ ಬಾಬುರಾವ ಪಾಟೀಲ (50) ಅವರು ಸಾವನಪ್ಪಿದನ್ನು ಅಲ್ಲಿದ್ದವರು ಖಚಿತಪಡಿಸಿದರು. ಅಶ್ವಿನಿ ಪಾಟೀಲ ಅವರು ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಅವರ ಶವದ ಬಳಿಯಿದ್ದ ಮೊಬೈಲನ್ನು ಪೊಲೀಸರು ಗಮನಿಸಿದ್ದು, ಅದರಲ್ಲಿ ಎರಡು ವಿಭಿನ್ನ ಮೆಸೆಜ್ ಕಾಣಿಸಿತು.
ಅಶ್ವಿನಿ ಪಾಟೀಲ ಅವರು ಅಕ್ಟೊಬರ್ 2ರಂದು ಕೇಕೇರಿ ಜಾತ್ರೆಗೆ ಹೋಗಿದ್ದರು. ಜಾತ್ರೆ ಮುಗಿಸಿದ ಅವರು ಮನೆ ಕಡೆ ಮರಳಿದ್ದು, ಕೊನೆಯದಾಗಿ ಬಿಡಿ ಬಳಿ ಜನ ಅವರನ್ನು ನೋಡಿದ್ದರು. ಆದರೆ, ಅವರು ಮನೆಗೆ ತಲುಪಿರಲಿಲ್ಲ. ಅಶ್ವಿನಿ ಪಾಟೀಲ ಅವರ ಪುತ್ರ ತಾಯಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿ ಪೊಲೀಸರ ಮೊರೆ ಹೋಗಿದ್ದರು.
ಶನಿವಾರ ಸಿಕ್ಕ ಶವದ ಪಕ್ಕದಲ್ಲಿದ್ದ ಮೊಬೈಲಿನಲ್ಲಿ `ತಾನು ಬೆಂಗಳೂರಿಗೆ ಹೋರಟಿರುವೆ’ ಎಂದು ಅಶ್ವಿನಿ ಪಾಟೀಲ ಅವರು ಮೆಸೆಜ್ ಮಾಡಿರುವುದು ಕಾಣಿಸಿತು. ಅದರೊಂದಿಗೆ `ತಾನು ಆತ್ಮಹತ್ಯೆ ಮಾಡಿಕೊಳ್ಳುವೆ’ ಎಂಬ ಸಂದೇಶ ಸಹ ಅದೇ ಮೊಬೈಲಿನಲ್ಲಿತ್ತು. ಶವದ ಮೇಲೆ ಗಾಯದ ಗುರುತುಗಳಿದ್ದರಿಂದ ಕೊಲೆಯ ಶಂಕೆವ್ಯಕ್ತವಾಯಿತು. ರಾಮನಗರ ಪೊಲೀಸರು ಪ್ರಕರಣದ ಮಾಹಿತಿ ಕಲೆಹಾಕಲಾಗುತ್ತಿದ್ದು, ತಲೆ ಹಾಗೂ ಮುಖದ ಮೇಲೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿರುವುದನ್ನು ಗಮನಿಸಿದರು.
ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅದಾದ ನಂತರವೇ ಸಾವಿನ ಕಾರಣ ಗೊತ್ತಾಗಲಿದೆ. ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ತಿನ್ನೆಘಾಟ್ ಹಾಗೂ ಖಾನಾಪುರ ಪ್ರದೇಶದಲ್ಲಿ ಸಾವಿನ ಬಗ್ಗೆ ಬಗೆ ಬಗೆಯ ಚರ್ಚೆ ನಡೆದಿದೆ. ಆತಂಕದ ವಾತಾವರಣವೂ ಕಾಣಿಸಿದೆ.